ನವದೆಹಲಿ, 23ಅಕ್ಟೋಬರ್ (ಹಿ.ಸ):
ಆ್ಯಂಕರ್ :ಪಿಂಚಣಿದಾರರ ಬರವಣಿಗೆಗಾಗಿ ಅವರನ್ನು ಗೌರವಿಸಲು, ಕೇಂದ್ರ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ದೆಹಲಿಯಲ್ಲಿ ಇಂದು ಅನುಭವ್ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿದೆ. ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ಸಚಿವ ಡಾ.ಜಿತೇಂದ್ರ ಸಿಂಗ್, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅನುಭವ್ ಪೋರ್ಟಲ್ಗೆ ೨೦೧೫ರಲ್ಲಿ ಚಾಲನೆ ನೀಡಲಾಗಿತ್ತು. ನಿವೃತ್ತರಾಗುತ್ತಿರುವ ಮತ್ತು ನಿವೃತ್ತರಾಗಿರುವ ಉದ್ಯೋಗಿಗಳು, ಸರ್ಕಾರದಲ್ಲಿ ತಮ್ಮ ಕೆಲಸದ ಅನುಭವ ವಿನಿಮಯ ಮಾಡಿಕೊಳ್ಳಲು ಹಾಗೂ ಆಡಳಿತದ ಸುಧಾರಣೆಗೆ ಸಲಹೆಗಳನ್ನು ನೀಡಬಹುದು ಆನ್ಲೈನ್ ವ್ಯವಸ್ಥೆ ಇದಾಗಿದೆ. ೯೬ ಸಚಿವಾಲಯಗಳು, ಇಲಾಖೆಗಳು ಹಾಗೂ ಸಂಸ್ಥೆಗಳು ಇದರಲ್ಲಿ ನೊಂದಾಯಿಸಿಕೊಂಡಿದ್ದು, ಈವೆರೆಗೂ ೧೦ ಸಾವಿರಕ್ಕೂ ಹೆಚ್ಚು ಬರವಣಿಗೆಗಳು ಈ ಪೋರ್ಟಲ್ನಲ್ಲಿ ಪ್ರಕಟಗೊಂಡಿವೆ. ಈ ಲೇಖನಗಳ ಪರಿಶೀಲನೆ ನಂತರ ನಾಲ್ಕು ಅನುಭವ್ ಪ್ರಶಸ್ತಿಗಳನ್ನು ಹಾಗೂ ೯ ತೀರ್ಪುಗಾರರ ಪ್ರಮಾಣಪತ್ರಗಳನ್ನು ನೀಡಲು ನಿರ್ಧರಿಸಲಾಗಿದೆ. ಎಂಟು ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳ ನೌಕರರು ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪ್ರಶಸ್ತಿ ಪುರಸ್ಕೃತರಿಗೆ ಪದಕ, ಪ್ರಮಾಣಪತ್ರ ಮತ್ತು ೧೦ ಸಾವಿರ ರೂಪಾಯಿ ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು. ತೀರ್ಪುಗಾರರ ಪ್ರಶಸ್ತಿ ಪಡೆದವರಿಗೆ ಪದಕ ಮತ್ತು ಪ್ರಮಾಣಪತ್ರ ಪ್ರದಾನ ಮಾಡಲಾಗುವುದು.
ಹಿಂದೂಸ್ತಾನ್ ಸಮಾಚಾರ್
