
ನವದೆಹಲಿ, 24ಅಕ್ಟೋಬರ್ (ಹಿ.ಸ):
ಆ್ಯಂಕರ್ :ಭಾರತ ಹಾಗೂ ಅಂತಾರಾಷ್ಟ್ರೀಯ ಅಣು ಇಂಧನ ಸಂಸ್ಥೆ ನಡುವೆ ಪಾಲುದಾರಿಕೆ ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಣು ಇಂಧನ ಸಂಸ್ಥೆ ಮಹಾನಿರ್ದೇಶಕ ರಫೇಲ್ ಮರಿಯಾನೊ ಗ್ರಾಸಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಈ ಕುರಿತು ಪ್ರಧಾನಿ ಟ್ವೀಟ್ ಮಾಡಿದ್ದು, ವಿವಿಧ ವಲಯಗಳಲ್ಲಿ ಅಣು ಇಂಧನ ವಹಿಸಲಿರುವ ಪಾತ್ರ ಹಾಗೂ ಇದರ ಬಳಕೆಯ ವಿಸ್ತರಣೆ ಕುರಿತು ಚರ್ಚಿಸಲಾಯಿತು ಎಂದಿದ್ದಾರೆ.
ಇಂಗಾಲಾಮ್ಲ ಹೊರಸೂಸುವಿಕೆ ಪ್ರಮಾಣ ಕಡಿಮೆ ಮಾಡುವ ಗುರಿ ಸಾಧನೆ ನಿಟ್ಟಿನಲ್ಲಿ ಅಣು ಇಂಧನ ಬಳಕೆ ಹಾಗೂ ಆಹಾರ, ಆರೋಗ್ಯ, ಜಲಸಂಸ್ಕರಣೆ, ಪ್ಲಾಸ್ಟಿಕ್ ಮಾಲಿನ್ಯ ನಿಯಂತ್ರಣ ಮುಂತಾದ ವಲಯಗಳಲ್ಲಿ ಅಣುಶಕ್ತಿ ಬಳಕೆ ಸಾಧ್ಯತೆ ಕುರಿತು ಅನ್ವೇಷಿಸಲಾಗುವುದು ಎಂದು ಪ್ರಧಾನಿ ತಿಳಿಸಿದ್ದಾರೆ.
ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಏಷ್ಯಾದಲ್ಲಿನ ಬೆಳವಣಿಗೆ ಕುರಿತು ಜೋರ್ಡನ್ ದೊರೆ ಅಬ್ದುಲ್ಲಾ ಬಿನ್ ಅಲ್ ಹುಸೇನ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
ಭಯೋತ್ಪಾದನೆ, ಹಿಂಸಾಚಾರ, ನಾಗರಿಕರ ಸಾವು-ನೋವು, ಭದ್ರತೆ ಬಲಪಡಿಸುವುದು ಮುಂತಾದ ವಿಚಾರವಾಗಿ ಸಮಾಲೋಚನೆ ನಡೆಸಿದ್ದಾಗಿ ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ನಾಗರಿಕರ ರಕ್ಷಣೆಗಾಗಿ ಕ್ಷಿಪ್ರ ಮಾರ್ಗಗಳನ್ನು ಕಂಡುಕೊಳ್ಳುವ ಪ್ರಯತ್ನ ಕುರಿತು ಚರ್ಚಿಸಲಾಯಿತು ಎಂದು ಅವರು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
