ವಿಜಯವಾಡ:
ಯಾವಾಗಲೂ ವಿವಾದದಿಂದಲೇ ಸುದ್ದಿ ಆಗುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಈಗ ರಾಜಕೀಯಕ್ಕೆ ಪ್ರವೇಶ ನೀಡುತ್ತಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇಷ್ಟು ದಿನ ಸಿನಿಮಾಗಳ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಬ್ಯುಸಿ ಆಗಿದ್ದ ಅವರು ಈಗ ಏಕಾಏಕಿ ರಾಜಕೀಯದ ಬಗ್ಗೆ ಆಸಕ್ತಿ ತೋರಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸಲಿದ್ದಾರೆ. ಅಚ್ಚರಿ ಏನೆಂದರೆ, ನಟ ಹಾಗೂ ಜನಸೇನಾ ಪಕ್ಷದ ಮುಖಂಡ ಪವನ್ ಕಲ್ಯಾಣ್ ವಿರುದ್ಧ ರಾಮ್ ಗೋಪಾಲ್ ವರ್ಮಾ ಕಣಕ್ಕೆ ಇಳಿಯಲಿದ್ದಾರೆ!
ಜನಸೇನಾ ಪಕ್ಷದ ಮುಖಂಡ ಪವನ್ ಕಲ್ಯಾಣ್ ಅವರು ಆಂಧ್ರದ ಪಿಠಾಪುರಂ ಕ್ಷೇತ್ರದಿಂದ ಸ್ಪರ್ಧಿಸುವ ಘೋಷಣೆ ಆಗಿದೆ. ಅದರ ಬೆನ್ನಲ್ಲೇ ರಾಮ್ ಗೋಪಾಲ್ ವರ್ಮಾ ಅವರು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಬ್ರೇಕಿಂಗ್ ಸುದ್ದಿ ನೀಡಿದ್ದಾರೆ. ಕೆಲವರು ಈ ನಿರ್ಧಾರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಂಥವರಿಗೂ ರಾಮ್ ಗೋಪಾಲ್ ವರ್ಮಾ ಉತ್ತರ ನೀಡಿದ್ದಾರೆ. ‘ನಾನು ತುಂಬ ಗಂಭೀರವಾಗಿದ್ದೇನೆ’ ಎಂದು ಅವರು ಪೋಸ್ಟ್ ಮಾಡಿದ್ದಾರೆ.
‘ದಿಢೀರ್ ನಿರ್ಧಾರ. ಪಿಠಾಪುರಂ ಲೋಕಸಭಾ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತೇನೆ ಎಂಬುದನ್ನು ತಿಳಿಸಲು ಸಂತೋಷವಾಗುತ್ತಿದೆ’ ಎಂದು ರಾಮ್ ಗೋಪಾಲ್ ವರ್ಮಾ ಅವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಆದರೆ ಈ ಬಗ್ಗೆ ಅವರು ಹೆಚ್ಚಿನ ಮಾಹಿತಿ ನೀಡಿಲ್ಲ. ‘ನೀವು ಯಾವ ಪಕ್ಷದಿಂದ ಸ್ಪರ್ಧಿಸುತ್ತೀರಿ’ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ರಾಮ್ ಗೋಪಾಲ್ ವರ್ಮಾ ಉತ್ತರ ನೀಡಿಲ್ಲ.
