ಬೆಂಗಳೂರು,9 ನವೆಂಬರ್ (ಹಿ.ಸ):
ಆ್ಯಂಕರ್ :ರಜನೀಕಾಂತ್ ನಟನೆಯ ‘ಜೈಲರ್’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಿರ್ವಹಿಸಿದ್ದ ಅತಿಥಿ ಪಾತ್ರ ಯಾವ ಮಟ್ಟಿಗೆ ಮೋಡಿ ಮಾಡಿದೆಯೆಂದರೆ ಶಿವಣ್ಣನಿಗೆ ತಮಿಳುನಾಡಿನಲ್ಲಿ ದೊಡ್ಡ ಅಭಿಮಾನಿ ವರ್ಗವೇ ಸೃಷ್ಟಿಯಾಗಿಬಿಟ್ಟಿದೆ. ಅದೇ ಸಿನಿಮಾದಲ್ಲಿ ಮೋಹನ್ಲಾಲ್, ಜಾಕಿ ಶ್ರಾಫ್ ಅವರುಗಳು ಸಹ ಅತಿಥಿ ಪಾತ್ರ ಮಾಡಿದ್ದರಾದರೂ ಶಿವಣ್ಣನ ಅತಿಥಿ ಪಾತ್ರ ದೊಡ್ಡ ಮಟ್ಟದ ಕ್ರೇಜ್ ಹುಟ್ಟು ಹಾಕಿತ್ತು. ಆ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಶಿವಣ್ಣ ಮತ್ತೊಂದು ತಮಿಳು ಸಿನಿಮಾದಲ್ಲಿ ನಟಿಸಿದ್ದು ಆ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ.
ಧನುಶ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವು ಪಕ್ಕಾ ಆಕ್ಷನ್ ಕತೆಯುಳ್ಳದ್ದಾಗಿದ್ದು ಸಿನಿಮಾದ ಕೆಲವು ಪೋಸ್ಟರ್ಗಳು ಮಾತ್ರವೇ ಈ ವರೆಗೆ ಬಿಡುಗಡೆ ಆಗಿದ್ದವು. ಪೋಸ್ಟರ್ಗಳಲ್ಲಿ ಬಂದೂಕು ಹಿಡಿದು ಖಡಕ್ ಲುಕ್ನಲ್ಲಿ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದು, ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಹುಟ್ಟಿಸಿದೆ.
ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗುತ್ತದೆ ಎಂದು ನಿರೀಕ್ಷಿಸಲಾಗಿದ್ದ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾವನ್ನು 2024ರ ಸಂಕ್ರಾಂತಿಗೆ ಬಿಡುಗಡೆ ಮಾಡಲಾಗುತ್ತಿದೆ. ಅಂದರೆ ಜನವರಿ 15ಕ್ಕೆ ಅಥವಾ 14 ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ನಿರ್ಮಾಣ ಸಂಸ್ಥೆಯಾದ ಸತ್ಯಜ್ಯೋತಿ ಫಿಲಮ್ಸ್ ಘೋಷಣೆ ಮಾಡಿದೆ. ಸಿನಿಮಾವನ್ನು ಅರುಣ್ ಮತ್ತೇಶ್ವರನ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಧನುಶ್, ಶಿವರಾಜ್ ಕುಮಾರ್ ಜೊತೆಗೆ ಪ್ರಿಯಾಂಕಾ ಅರುಲ್ ಮೋಹನ್, ಜಾನ್ ಕೊಕ್ಕೆನ್, ನಾಸರ್ ಇನ್ನೂ ಕೆಲವು ಉತ್ತಮ ನಟರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
