ಹೈದರಾಬಾದ್, 3 ಡಿಸೆಂಬರ್(ಹಿ.ಸ):
ಆ್ಯಂಕರ್ :
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ‘ಪುಷ್ಪ’ ಸಿನಿಮಾ ಸೀಕ್ವೆಲ್ ಎನ್ನುವ ಕಾರಣಕ್ಕೆ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ. ಈಗ ಅಲ್ಲು ಅರ್ಜುನ್ಗೆ ಶೂಟಿಂಗ್ ಸಂದರ್ಭದಲ್ಲಿ ಬೆನ್ನು ನೋವು ತೀವ್ರವಾಗಿ ಕಾಡಿದೆ. ಇದರಿಂದ ಶೂಟಿಂಗ್ ಅರ್ಧಕ್ಕೆ ನಿಂತಿದೆ ಎನ್ನಲಾಗಿದೆ. ಅಲ್ಲು ಅರ್ಜುನ್ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಆತಂಕ ಆಗಿದೆ. ಈ ಬಗ್ಗೆ ಅವರ ಕಡೆಯಿಂದ ಅಪ್ಡೇಟ್ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಚಿತ್ರದ ಸಾಂಗ್ ಹಾಗೂ ಫೈಟ್ ಶೂಟ್ಗೆ ರೆಡಿ ಆಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ಬೆನ್ನು ನೋವು ಕಾಡಿದೆ. ಹೀಗಾಗಿ ಅವರು ಸೆಟ್ನಿಂದ ನೇರವಾಗಿ ಆಸ್ಪತ್ರೆಗೆ ತೆರಳಿದ್ದಾರೆ ಎನ್ನಲಾಗಿದೆ. ಸತತವಾಗಿ ಶೂಟಿಂಗ್ನಲ್ಲಿ ಭಾಗಿ ಆಗಿದ್ದರಿಂದ ಈ ನೋವು ಬಂದಿರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲು ಅರ್ಜುನ್ ಅವರಿಗೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಫ್ಯಾನ್ಸ್ ಕೋರಿದ್ದಾರೆ.
ಎರಡು ವಾರಗಳ ಕಾಲ ಅಲ್ಲು ಅರ್ಜುನ್ ಅವರಿಗೆ ಬ್ರೇಕ್ ನೀಡಲು ಸುಕುಮಾರ್ ಅವರು ನಿರ್ಧರಿಸಿದ್ದಾರೆ. ಬೆನ್ನು ನೋವು ಇದ್ದ ಹೊರತಾಗಿಯೂ ಶೂಟ್ ಮಾಡಲು ಅಲ್ಲು ಅರ್ಜುನ್ ರೆಡಿ ಇದ್ದರು. ಆದರೆ, ಈ ನೋವನ್ನು ನಿರ್ಲಕ್ಷಿಸಿ ಶೂಟಿಂಗ್ ಮುಂದುವರಿಸಿದರೆ ಅದು ಮತ್ತಷ್ಟು ದೊಡ್ಡ ಸಮಸ್ಯೆ ತಂದೊಡ್ಡಬಹುದು. ಅದು ಆಗದಂತೆ ನೋಡಿಕೊಳ್ಳಲು ಸುಕುಮಾರ್ ಈ ನಿರ್ಧಾರಕ್ಕೆ ಬಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
