ರಾಯಚೂರು, 26 ಅಕ್ಟೋಬರ್ (ಹಿ.ಸ):
ಆ್ಯಂಕರ್ : ಮನೆ ಮನೆಗೆ ಕುಡಿಯುವ ನೀರು ಪೂರೈಕೆಯ ಜಲ ಜೀವನ್ ಮಿಷನ್ ಕಾಮಗಾರಿಯ ಲಕ್ಷಾಂತರ ಮೌಲ್ಯದ ಪೈಪ್ ಗಳ ಬಂಡಲ್ ಸುಟ್ಟು ಕರುಕಲಾದ ಘಟನೆ ರಾಯಚೂರು ತಾಲೂಕಿನ ದೇವಸೂಗೂ ರಿನಲ್ಲಿ ಜರುಗಿದೆ.
ಗ್ರಾಮ ಪಂಚಾಯತಿ ಕಚೇರಿ ಆವರಣದಲ್ಲಿ ಸಂಗ್ರಹಿಸಿದ ಸುಮಾರು ೧೨ ಲಕ್ಷ ಮೌಲ್ಯದ ಪೈಪು ಬೆಂಕಿಗೆ ಆಹುತಿಯಾಗಿರುವುದಾಗಿ ಗೊತ್ತಾಗಿದೆ.
ಆವರಣದ ಹೊರ ಭಾಗದಲ್ಲಿ ಕಸ, ಹುಲ್ಲುಕಡ್ಡಿ ಬೆಳೆದಿದ್ದರಿಂದ ಕಿಡಿಗೇಡಿಗಳು ಬೆಂಕಿಕಡ್ಡಿ ಗೀಚಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸಲಾಗುತ್ತಿದೆ.
ಕಾಮಗಾರಿಯ ಉಪ ಗುತ್ತಿಗೆದಾರ ಸಂಗ್ರಹಿಸಿಟ್ಟಿದ್ದ ಪೈಪುಗಳು ಗ್ರಾಮದ ಮನೆಮನೆಗೆ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಲಾಗಿತ್ತು. ಏಕಾಏಕಿ ಬೆಂಕಿ ಕಾಣಿಸಿಕೊಂಡಾಗ ಸುತ್ತಮುತ್ತಲಿನ ಜನ ಪಿಡಿಓಗೆ ಮಾಹಿತಿ ನೀಡಿ ಅಗ್ನಿಶಾಮಕ ದಳಕ್ಕೆ ಸಂಪರ್ಕ ಮಾಡಿದ್ದರಿಂದ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಸಂಪರ್ಕಕ್ಕೆ ಸಿಗಲಿಲ್ಲ.
ಈ ಬಗ್ಗೆ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ, ದೂರು ನೀಡಿಲ್ಲವಾದ್ದರಿಂದ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
