
ಕೋಲಾರ, ೧೮ ಜನವರಿ (ಹಿ.ಸ) :
ಆ್ಯಂಕರ್ : ಕಳೆದ ೯ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ಕಾಮಸಮುದ್ರಂ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ೨೦೧೪ನೇ ಸಾಲಿನಲ್ಲಿ ದಾಖಲಾಗಿದ್ದ ಸುಲಿಗೆ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಗಳಿಬ್ಬರನ್ನು ೯ ವರ್ಷಗಳ ಬಳಿಕ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ತಮಿಳುನಾಡು ಧರ್ಮಪುರಿ ಜಿಲ್ಲೆಯ ಪಾಪಾರ್ಪಟ್ಟಿ ಗ್ರಾಮದ ಮುನಿಯಪ್ಪ ಮತ್ತು ಶೇಖರ್ ಎಂಬುವರು ಸುಲಿಗೆ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಆರೋಪಿಗಳ ಇರುವಿಕೆಯ ಬಗ್ಗೆ ವೃತ್ತಿಪರವಾಗಿ ತನಿಖೆ ಮಾಡಿ, ಇರುವಿಕೆಯ ಬಗ್ಗೆ ಖಚಿತಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಕಳೆದ ೯ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಕಾಮಸಮುದ್ರಂ ಪೊಲೀಸ್ ಠಾಣೆಯ ಪಿ.ಎಸ್.ಐ. ಕಿರಣ್ಕುಮಾರ್, ಹೆಡ್ಕಾನ್ಸ್ಟೇಬಲ್ ತಾಜ್ಪಾಷ, ಕಾನ್ಸ್ಟೇಬಲ್ ಹರೀಶ್ ಅವರುಗಳ ಉತ್ತಮ ಕಾರ್ಯವನ್ನು ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಶಿಸಿದರು.
