ನವದೆಹಲಿ,
ಭಾರತವು ಸಮುದ್ರ ಮಾರ್ಗಗಳ ಮೂಲಕ ಅಂತರರಾಷ್ಟ್ರೀಯ ಸಂಬಂಧಗಳ ಸುದೀರ್ಘ ಇತಿಹಾಸವನ್ನು ಹೊಂದಿದೆ. ಪ್ರಾಚೀನ ಕಾಲದಿಂದಲೂ, ನಮ್ಮ ದಕ್ಷಿಣದ ರಾಜ್ಯಗಳು, ಪೂರ್ವ ಏಷ್ಯಾವು ಆಫ್ರಿಕಾದ ದೇಶಗಳೊಂದಿಗೆ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿವೆ. ಇನ್ನಿತ್ತರ ಸಾರಿಗೆ ಸಂಪರ್ಕಗಳಿಗೆ ಹೋಲಿಕೆ ಮಾಡಿದರೆ ಹಡಗುಗಳ ಮುಖಾಂತರ ಸರುಕುಗಳನ್ನು ಸಾಗಿಸಲು ತಗಲುವ ವೆಚ್ಚವು ಕಡಿಮೆಯಾಗಿದೆ. ಅದಲ್ಲದೇ ಆಮದು ಹಾಗೂ ರಫ್ತುಗಳ ಮೂಲಕ ದೇಶದ ಬೆಳವಣಿಗೆಯಲ್ಲಿ ಈ ಬಂದರುಗಳ ಪಾತ್ರವು ಬಹುದೊಡ್ಡದು. ಹೀಗಾಗಿ ಭಾರತೀಯರ ಆರ್ಥಿಕತೆಯ ಮೂಲ ವರಮಾನವೇ ಈ ಬಂದರುಗಳಿಂದ ಎಂದೇಳಬಹುದು. ರಾಷ್ಟ್ರೀಯ ಕಡಲ ದಿನವು, ಕಡಲ ವ್ಯಾಪಾರ, ಕಡಲ ರಕ್ಷಣೆ ಮತ್ತು ಸಮುದ್ರ ಸಂಪನ್ಮೂಲಗಳ ಅಭಿವೃದ್ಧಿಯ ಪ್ರಾಮುಖ್ಯತೆಯನ್ನು ತಿಳಿಸುವ ಉದ್ದೇಶವನ್ನು ಹೊಂದಿದೆ.
ರಾಷ್ಟ್ರೀಯ ಕಡಲ ದಿನದ ಇತಿಹಾಸ
ಭಾರತೀಯ ಉದ್ಯಮಿಗಳ ದಿ ಸಿಂಧಿಯಾ ಸ್ಟೀಮ್ ನ್ಯಾವಿಗೇಶನ್ ಲಿ ಈ ಹಡಗು ಕಂಪೆನಿಯ ಮೊದಲ ಹಡಗು ಎಸ್ಎಸ್ ಲಾಯಲ್ಟಿ ಬಾಂಬೆಯಿಂದ (ಮುಂಬಯಿ) ಯುನೈಟೆಡ್ ಕಿಂಗ್ಡಮ್ (ಲಂಡನ್)ಗೆ ಪ್ರಯಾಣಿಸಿತು. ಈ ಭಾರತೀಯ ಹಡಗು 1919ರ ಎಪ್ರಿಲ್ 5ರಂದು ತನ್ನ ಮೊದಲ ಸಮುದ್ರಯಾನವನ್ನು ಪ್ರಾರಂಭಿಸಿತು. ಇದರ ನೆನಪಿಗೆ ಈ ದಿನವನ್ನು 1964ರಿಂದ ಆಚರಿಸಲಾಗುತ್ತಿದೆ. ಹೀಗಾಗಿ ಪ್ರತೀ ವರ್ಷ ಎಪ್ರಿಲ್ 5ರಂದು ಭಾರತದಲ್ಲಿ ರಾಷ್ಟ್ರೀಯ ಕಡಲ ದಿನವನ್ನು ಆಚರಿಸಲಾಗುತ್ತದೆ.
ರಾಷ್ಟ್ರೀಯ ಕಡಲ ದಿನದ ಮಹತ್ವ
ಸಮುದ್ರಯಾನವು ಪ್ರಪಂಚದಾದ್ಯಂತ ಸರಕುಗಳನ್ನು ಸಾಗಿಸುವ ಅತ್ಯಂತ ಪರಿಣಾಮಕಾರಿ ಹಾಗೂ ಸುರಕ್ಷಿತ ಮಾರ್ಗವಾಗಿದೆ. ಈ ರಾಷ್ಟ್ರೀಯ ಕಡಲ ದಿನವನ್ನು ಅಂತರಾಷ್ಟ್ರೀಯ ಆರ್ಥಿಕತೆಯನ್ನು ಬೆಂಬಲಿಸಲು ಆಚರಿಸಲಾಗುತ್ತದೆ. ಈ ದಿನದಂದು ಭಾರತೀಯ ಕಡಲ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ನೀಡಿದವರನ್ನು ಗೌರವಿಸಿ ಪ್ರಶಸ್ತಿ ನೀಡಲಾಗುತ್ತದೆ
