ಸ್ಯಾಮೆರ್ ಕ್ಯಾಂಡ್,20ನವೆಂಬರ್ (ಹಿ.ಸ):
ಆ್ಯಂಕರ್ :
ಬೆಂಗಳೂರಿನ ವ್ಯಕ್ತಿಯೊಬ್ಬರು ದೂರದ ಉಜ್ಬೆಕಿಸ್ತಾನದಲ್ಲಿ ಭಾರತೀಯ ರೆಸ್ಟೋರೆಂಟ್ವೊಂದನ್ನು ತೆರೆದಿದ್ದು, ಅಲ್ಲಿಯ ಭಾರತೀಯ ಸಮುದಾಯ ಮಾತ್ರವಲ್ಲ, ಸ್ಥಳೀಯ ಜನರಿಗೂ ಅಚ್ಚುಮೆಚ್ಚಾಗುವಂತೆ ಬೆಳೆದಿದೆ. ಸ್ಟೀಲ್ ಕಂಪನಿಯೊಂದರಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ಮೊಹಮ್ಮದ್ ನೌಶಾದ್ ಅವರು ಒಂದು ವರ್ಷದ ಹಿಂದೆ (2022ರಲ್ಲಿ) ಉಜ್ಬೆಕಿಸ್ತಾನದ ಸ್ಯಾಮೆರ್ ಕ್ಯಾಂಡ್ ನಗರದಲ್ಲಿ ಆರಂಭಿಸಿದ ‘ದಿ ಇಂಡಿಯನ್ ಕಿಚನ್’ ರೆಸ್ಟೋರೆಂಟ್ ಬಹಳ ಜನಪ್ರಿಯವಾಗಿದೆ.
ಕುತೂಹಲವೆಂದರೆ ಮೊಹಮ್ಮದ್ ನೌಷಾದ್ ಅವರು ಭಾರತೀಯ ಸಮುದಾಯದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತೀಯ ಶೈಲಿಯ ಹೋಟೆಲ್ ಅನ್ನು ಆರಂಭಿಸಿದ್ದರು. ಅವರ ಹೋಟೆಲ್ನ ಊಟದ ರುಚಿ ಭಾರತೀಯರಿಗೆ ಮಾತ್ರವಲ್ಲ, ಸ್ಥಳೀಯ ಉಜ್ಬೆಕ್ ಜನರನ್ನೂ ಸೆಳೆದಿದೆ. ಇಲ್ಲಿಯ ಮಸಾಲೆ ದೋಸೆ ಮತ್ತು ಚಿಕನ್ ಬಿರಿಯಾನಿ ಎಲ್ಲರಿಗೂ ಅಚ್ಚುಮೆಚ್ಚಿನದ್ದಾಗಿದೆ.
ದಿ ಇಂಡಿಯಾ ಕಿಚನ್ ಹೋಟೆಲ್ ಯಶಸ್ಸಿನ ಹಿಂದೆ ಮೊಹಮ್ಮದ್ ನೌಷಾದ್ ಮಾತ್ರವಲ್ಲ ಅಶೋಕ್ ಕಾಳಿದಾಸ ಎಂಬ ವ್ಯಕ್ತಿಯೂ ಇದ್ದಾರೆ. ತಮಿಳುನಾಡು ಮೂಲದ ಅಶೋಕ್ ಕಾಳಿದಾಸ ಅವರು ಈ ರೆಸ್ಟೋರೆಂಟ್ನ ಬಾಣಸಿಗ ಅಥವಾ ಚೆಫ್. ತಾಷ್ಕೆಂಟ್ನಲ್ಲಿದ್ದ ಅವರನ್ನು ನೌಷಾದ್ ಅವರು ಸ್ಯಾಮೆರ್ಕ್ಯಾಂಡ್ಗೆ ಕರೆತಂದು ಜವಾಬ್ದಾರಿ ಕೊಟ್ಟಿದ್ದಾರೆ. ಇಬ್ಬರು ದಕ್ಷಿಣ ಭಾರತೀಯರು ಸೇರಿ ಉಜ್ಬೆಕಿಸ್ತಾನದಲ್ಲಿ ಭಾರತೀಯ ಸಾಂಪ್ರದಾಯಿಕ ಆಹಾರವನ್ನು ಉಣಬಡಿಸುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
