ನವದೆಹಲಿ, 26 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪ್ರಯಾಣಿಕರ ಸಂಖ್ಯೆಯಲ್ಲಿ ವೇಗವಾಗಿ ಹಾಗೂ ನಿರಂತರವಾಗಿ ಸಂಭವಿಸುತ್ತಿರುವ ಹೆಚ್ಚಳಕ್ಕೆ ಪ್ರತಿಕ್ರಿಯೆಯಾಗಿ, ಭಾರತೀಯ ರೈಲ್ವೆ ಮಹತ್ವಾಕಾಂಕ್ಷಿ ಸಾಮರ್ಥ್ಯ ವಿಸ್ತರಣಾ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯಡಿ, ಮುಂದಿನ ಐದು ವರ್ಷಗಳಲ್ಲಿ ದೇಶದ 48 ಪ್ರಮುಖ ನಗರಗಳಲ್ಲಿ ರೈಲುಗಳ ಮೂಲ ಸಾಮರ್ಥ್ಯವನ್ನು ಪ್ರಸ್ತುತ ಮಟ್ಟಕ್ಕಿಂತ ದ್ವಿಗುಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ಈ ಯೋಜನೆಯನ್ನು 2030ರ ವೇಳೆಗೆ ಪೂರ್ಣಗೊಳಿಸುವ ಉದ್ದೇಶವಿದ್ದು, ಅದರ ಪ್ರಯೋಜನಗಳು ಹಂತ ಹಂತವಾಗಿ ಅದಕ್ಕೂ ಮೊದಲು ಜನರಿಗೆ ದೊರೆಯಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ರೈಲ್ವೆ ಸಚಿವಾಲಯದ ಮಾಹಿತಿಯಂತೆ, ಸಾಮರ್ಥ್ಯ ದ್ವಿಗುಣಗೊಳಿಸುವ ಕಾರ್ಯದಲ್ಲಿ ಅಸ್ತಿತ್ವದಲ್ಲಿರುವ ಮೂಲಸೌಕರ್ಯದ ವ್ಯಾಪಕ ವಿಸ್ತರಣೆ ಸೇರಿದೆ. ಇದರ ಭಾಗವಾಗಿ ಹೆಚ್ಚುವರಿ ಪ್ಲಾಟ್‌ಫಾರ್ಮ್‌ಗಳು, ಸ್ಟೇಬ್ಲಿಂಗ್ ಲೈನ್‌ಗಳು, ಪಿಟ್ ಲೈನ್‌ಗಳು ಮತ್ತು ಟರ್ಮಿನಲ್‌ಗಳಲ್ಲಿ ಅಗತ್ಯವಿರುವಷ್ಟು ಶಂಟಿಂಗ್ ಸೌಲಭ್ಯಗಳನ್ನು ನಿರ್ಮಿಸಲಾಗುತ್ತದೆ. ಜೊತೆಗೆ ನಗರ ಪ್ರದೇಶಗಳಲ್ಲಿ ಹೊಸ ಟರ್ಮಿನಲ್‌ಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲಾಗುವುದು. ಮೆಗಾ ಕೋಚಿಂಗ್ ಸಂಕೀರ್ಣಗಳಂತಹ ನಿರ್ವಹಣಾ ಸೌಲಭ್ಯಗಳ ನಿರ್ಮಾಣ, ಸಿಗ್ನಲಿಂಗ್ ವ್ಯವಸ್ಥೆಗಳ ನವೀಕರಣ, ಸಂಚಾರ ಸುಗಮಗೊಳಿಸುವ ಕಾಮಗಾರಿಗಳು ಹಾಗೂ ಮಲ್ಟಿ-ಟ್ರ್ಯಾಕಿಂಗ್ ಮೂಲಕ ವಿಭಾಗ ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯಗಳೂ ಈ ಯೋಜನೆಯೊಳಗೊಂಡಿವೆ.
ಟರ್ಮಿನಲ್ ಸಾಮರ್ಥ್ಯ ವಿಸ್ತರಣೆಯನ್ನು ಯೋಜಿಸುವ ವೇಳೆ ಸಮತೋಲಿತ ಅಭಿವೃದ್ಧಿ ಸಾಧಿಸುವ ಉದ್ದೇಶದಿಂದ ನೆರೆಯ ನಿಲ್ದಾಣಗಳನ್ನೂ ಯೋಜನೆಯಲ್ಲಿ ಸೇರಿಸಲಾಗುತ್ತಿದೆ. ಉದಾಹರಣೆಗೆ, ಪುಣೆಯಲ್ಲಿ ಪುಣೆ ಮುಖ್ಯ ನಿಲ್ದಾಣದ ಜೊತೆಗೆ ಹಡಪ್ಸರ್, ಖಡ್ಕಿ ಮತ್ತು ಆಳಂಡಿ ನಿಲ್ದಾಣಗಳನ್ನು ಸಹ ಸಾಮರ್ಥ್ಯ ವಿಸ್ತರಣೆಗೆ ಗುರುತಿಸಲಾಗಿದೆ.
ಈ ಮಹತ್ವದ ಯೋಜನೆ ಉಪನಗರ ಮತ್ತು ಉಪನಗರವಲ್ಲದ ರೈಲು ಸೇವೆಗಳ ಅಗತ್ಯವನ್ನೂ ಸಮಗ್ರವಾಗಿ ಪರಿಗಣಿಸುತ್ತದೆ. ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ ಮತ್ತು ಹೈದರಾಬಾದ್ ಸೇರಿದಂತೆ 48 ಪ್ರಮುಖ ನಗರಗಳಿಗೆ ಸಂಬಂಧಿಸಿದಂತೆ ಪ್ರಸ್ತಾವಿತ, ಯೋಜಿತ ಮತ್ತು ಈಗಾಗಲೇ ಅನುಮೋದಿತ ಎಲ್ಲಾ ಕಾಮಗಾರಿಗಳನ್ನು ಒಳಗೊಂಡ ಸಮಗ್ರ ಹಾಗೂ ಸಮಯಬದ್ಧ ಕ್ರಿಯಾ ಯೋಜನೆಯನ್ನು ರೂಪಿಸಲಾಗುತ್ತದೆ.
2030ರ ವೇಳೆಗೆ ಸಾಮರ್ಥ್ಯವನ್ನು ದ್ವಿಗುಣಗೊಳಿಸುವುದು ಅಂತಿಮ ಗುರಿಯಾಗಿದ್ದರೂ, ಜನನಿಬಿಡ ನಿಲ್ದಾಣಗಳಲ್ಲಿ ಸಂಚಾರದ ಒತ್ತಡವನ್ನು ತಕ್ಷಣವೇ ತಗ್ಗಿಸುವ ಉದ್ದೇಶದಿಂದ ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ಸಾಮರ್ಥ್ಯ ಹೆಚ್ಚಿಸಲಾಗುವುದು ಎಂದು ರೈಲ್ವೆ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿಗಳನ್ನು ತಕ್ಷಣದ, ಅಲ್ಪಾವಧಿ ಮತ್ತು ದೀರ್ಘಾವಧಿ ಎಂಬ ಮೂರು ವಿಭಾಗಗಳಾಗಿ ವರ್ಗೀಕರಿಸಲಾಗುತ್ತದೆ.
ಈ ಕುರಿತು ರೈಲ್ವೆ ಮಂಡಳಿಯ ಅಧ್ಯಕ್ಷ ಹಾಗೂ ಸಿಇಒ ಸತೀಶ್ ಕುಮಾರ್ ಅವರು ಎಲ್ಲಾ ವಲಯ ರೈಲ್ವೆಗಳ ಜನರಲ್ ಮ್ಯಾನೇಜರ್‌ಗಳಿಗೆ ಪತ್ರ ಬರೆದಿದ್ದು, ಪ್ರಸ್ತಾವಿತ ಯೋಜನೆಗಳು ಸ್ಪಷ್ಟವಾಗಿದ್ದು, ನಿಗದಿತ ಸಮಯ ಮಿತಿ ಹಾಗೂ ನಿರ್ದಿಷ್ಟ ಫಲಿತಾಂಶಗಳನ್ನು ಹೊಂದಿರಬೇಕು ಎಂದು ಸೂಚಿಸಿದ್ದಾರೆ. ಟರ್ಮಿನಲ್‌ಗಳಲ್ಲಷ್ಟೇ ಅಲ್ಲದೆ, ವಿಭಾಗ ಸಾಮರ್ಥ್ಯ, ಯಾರ್ಡ್ ಸಾಮರ್ಥ್ಯ ಮತ್ತು ಕಾರ್ಯಾಚರಣೆಯ ಅಡಚಣೆಗಳನ್ನು ನಿವಾರಿಸುವ ಮೂಲಕ ವಿಭಾಗ ಮಟ್ಟದಲ್ಲಿಯೂ ರೈಲು ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸುವತ್ತ ಗಮನ ಹರಿಸಬೇಕು ಎಂದು ಅವರು ನಿರ್ದೇಶಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
