ಬೆಂಗಳೂರು, 22 ಅಕ್ಟೋಬರ್ (ಹಿ.ಸ.):
ಆ್ಯಂಕರ್:
ಆರ್ಎಸ್ಎಸ್ ಅಧಿಕೃತವಾಗಿ ನೋಂದಣಿ ಮಾಡಿಕೊಂಡಿರುವ ಬಗ್ಗೆ ದಾಖಲೆ ತೋರಿಸಲಿ. ಅನಧಿಕೃತ ಸಂಘಟನೆಯಾಗಿರುವ ಆರ್ಎಸ್ಎಸ್ಗೆ ಎಲ್ಲಿಂದ ಹಣ ಬರುತ್ತಿದೆ? ಬಟ್ಟೆಗಳ ಖರೀದಿ ಹಾಗೂ ಕಟ್ಟಡಗಳ ನಿರ್ಮಾಣಕ್ಕೆ ಯಾರು ಹಣ ಕೊಡುತ್ತಿದ್ಧಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ಧಾರೆ.
ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್ಎಸ್ಎಸ್ ಸಂಘಟನೆ ನೋಂದಣಿ ಮಾಡಿಸಿಕೊಂಡಿರುವ ಕುರಿತು ದಾಖಲೆ ನೀಡಿದರೆ ಈ ಬಗ್ಗೆ ಪ್ರಶ್ನಿಸುವುದಿಲ್ಲ. ಕಾನೂನುಬದ್ಧವಾಗಿ ನೋಂದಣಿ ಮಾಡಿಸಿಕೊಂಡರೆ, ಸಂಘಟನೆಗೆ ಯಾರು ಹಣ ನೀಡುತ್ತಾರೆ ಹೇಗೆ ಬರಲಿದೆ ಎಂಬುದನ್ನು ತಿಳಿಯಲಿದೆ. ಅಲ್ಲದೆ ತೆರಿಗೆ ವ್ಯಾಪ್ತಿಗೂ ಬರುವ ಕಾರಣದಿಂದಲೇ ಇದುವರೆಗೂ ಸಂಘಟನೆಯನ್ನು ನೋಂದಣಿ ಮಾಡಿಸಿಕೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಇನ್ನೂ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನವೆಂಬರ್ ೨ರಂದು ಆರ್‌ಎಸ್‌ಎಸ್ ನಡೆಸಲು ಉದ್ದೇಶಿಸಿರುವ ಪಥಸಂಚಲನದ ವೇಳೆ ತಮಗೂ ಪಥಸಂಚಲನಕ್ಕೆ ದಲಿತ ಸಂಘಟನೆಗಳು ಅನುಮತಿ ಕೇಳಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಚಿತ್ತಾಪುರ ಹಾಗೂ ಚಾಮರಾಜನಗರ ಸೇರಿದಂತೆ ರಾಜ್ಯದ ಇತರೆ ಕಡೆಗಳಲ್ಲಿ ಭೀಮ್ ಆರ್ಮಿ ಹಾಗೂ ದಲಿತ ಪ್ಯಾಂಥರ್ಸ್ ಸಂಘಟನೆಗಳು ಪಥ ಸಂಚಲನಕ್ಕೆ ಅನುಮತಿ ಕೇಳಿವೆ. ಎಲ್ಲ ಸಂಘಟನೆಗಳಿಗೂ ಒಂದೇ ಮಾನದಂಡ ಅನ್ವಯವಾಗಲಿದೆ ಎಂದ ಸಚಿವರು ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನ ಅನುಮತಿ ಕುರಿತು, ನ್ಯಾಯಾಲಯದ ಆದೇಶದ ನಂತರ ತಿಳಿಯಲಿದೆ, ಯಾವುದೇ ಸಂಘಟನೆಯಾದರೂ ಮೊದಲು ಅನುಮತಿ ಪಡೆದುಕೊಳ್ಳಬೇಕು. ಅರ್ಜಿ ಪರಿಶೀಲಿಸಿದ ಬಳಿಕ ಜಿಲ್ಲಾಡಳಿತ ಈ ಬಗ್ಗೆ ನಿರ್ಧರಿಸಲಿದೆ ಎಂದರು.
—————
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
