ಗುವಾಹಟಿ, 30 ಏಪ್ರಿಲ್ : ಆ್ಯಂಕರ್:ದೇಶದಲ್ಲಿ ಬಿಜೆಪಿ ಪರ ಅಲೆಯಿದ್ದು, ಪ್ರಸಕ್ತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ೪೦೦ ಸ್ಥಾನಗಳ ಗಡಿ ದಾಟಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಸ್ಸಾಂನ ಗುವಾಹಟಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ೧೦ ವರ್ಷಗಳಲ್ಲಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಿದ್ದೇವೆ, ಈ ಬಾರಿಯೂ ಬಹುಮತದ ಸರ್ಕಾರ ರಚನೆಯಾಗಲಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದವರ್ಗದವರಿಗೂ ನ್ಯಾಯ ಕೊಡಿಸುವ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್ಡಿಎ ಸರ್ಕಾರ ಎಲ್ಲಾ ವರ್ಗಗಳ ಕಲ್ಯಾಣಕ್ಕೆ ಆದ್ಯತೆ ನೀಡಿ, ಕೆಲಸ ಮಾಡಲಿದೆ. ದೇಶದ ಹಿತ ಕಾಯುವಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಅಮಿತ್ ಶಾ ಹೇಳಿದರು. ಇದೇ ವೇಳೆ ಅವರು, ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅಶ್ಲೀಲ ವಿಡಿಯೊ ಹರಿದಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಮಾತೃಶಕ್ತಿಯನ್ನು ಅಪಮಾನಿಸುವುದನ್ನು ಸಹಿಸಲಾರೆವು. ಪ್ರಜ್ವಲ್ ರೇವಣ್ಣ ಕುರಿತಾದ ವಿಡಿಯೊ ಒಪ್ಪಲು ಸಾಧ್ಯವಿಲ್ಲ, ಮಹಿಳೆಯರನ್ನು ಗೌರವಿಸುವುದು ಬಿಜೆಪಿ ಸಂಸ್ಕೃತಿಯಾಗಿದೆ ಎಂದರು. ಕಾಂಗ್ರೆಸ್ನ ಪ್ರಮುಖ ನಾಯಕರ ಮೇಲೂ ವಿಡಿಯೊ ಪ್ರಕರಣಗಳಿವೆ ಎಂದು ಹೇಳಿದ ಅಮಿತ್ ಶಾ, ನನ್ನ ಕುರಿತಾದ ನಕಲಿ ವಿಡಿಯೊವನ್ನು ಸಹ ಕಾಂಗ್ರೆಸ್ ಈ ಹಿಂದೆ ತಯಾರಿಸಿತ್ತು ಎಂದು ಆರೋಪಿಸಿ, ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಕರ್ನಾಟಕ ಸರ್ಕಾರ ಕಾನೂನು ರೀತಿ ಕ್ರಮ ಕೈಗೊಳ್ಳಲಿ ಎಂದು ಹೇಳಿದರು.
