ನವದೆಹಲಿ,:ಆ್ಯಂಕರ್ :ದೇಶದ ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಕೇಂದ್ರ ಚುನಾವಣಾ ಆಯೋಗ ಮಾರ್ಗಸೂಚಿಯೊಂದನ್ನು ಹೊರಡಿಸಿದೆ. ದೇಶದ ಬಹುತೇಕ ಪ್ರದೇಶಗಳಲ್ಲಿ ಈಗ ರಣ ಬಿಸಿಲಿದ್ದು, ಉಷ್ಣಗಾಳಿ ಬೀಸುತ್ತಿದೆ. ಬೇಸಿಗೆ ತೀವ್ರಗೊಂಡಂತೆ ಮುಂಬರುವ ದಿನಗಳಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇರುವುದಾಗಿ ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಿಸಿಲು ಹೆಚ್ಚಾದಂತೆ ಜೂನ್ ತಿಂಗಳವರೆಗೆ ಬಿಸಿಗಾಳಿಯ ತೀವ್ರತೆ ಮತ್ತು ಅವಧಿಯೂ ಹೆಚ್ಚಾಗುವ ಆತಂಕವಿದೆ. ಇಂತಹ ಪರಿಸ್ಥಿತಿಯ ನಿರ್ವಹಣೆ ಕುರಿತಂತೆ ರಾಷ್ಟ್ರೀಯ ವಿಕೋಪ ನಿರ್ವಹಣೆ ಪ್ರಾಧಿಕಾರ ನೀಡಿರುವ ಸಲಹೆ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎನ್ನುವ ಹವಾಮಾನ ಇಲಾಖೆಯ ಸೂಚನೆಗಳನ್ನು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ. ಮಧ್ಯಾಹ್ನ ೧೨ ರಿಂದ ೩ ಗಂಟೆಯ ನಡುವೆ ಜನರು ಹೊರಗೆ ಹೋಗುವುದನ್ನು ತಪ್ಪಿಸಬೇಕು. ಇದರಿಂದ ಉಷ್ಣಗಾಳಿಯ ಪರಿಣಾಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ. ಬಿರುಬೇಸಿಗೆಯ ದಿನಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು ಮತ್ತು ತಾಜಾ ಆಹಾರ ಸೇವಿಸಬೇಕು ಎಂದೂ ಸಹ ಶಿಫಾರಸ್ಸು ಮಾಡಲಾಗಿದೆ. ಲೋಕಸಭಾ ಚುನಾವಣೆ ದಿನಗಳಲ್ಲಿ ದೇಶದ ಎಲ್ಲ ಮತಗಟ್ಟೆಗಳಲ್ಲಿ ಕುಡಿಯುವ ನೀರು ಮತ್ತು ನೆರಳಿನ ವ್ಯವಸ್ಥೆಯಂತಹ ಕನಿಷ್ಠ ಮೂಲಸೌಕರ್ಯಗಳನ್ನು ಸಜ್ಜಾಗಿಡಬೇಕೆಂದು ಕೇಂದ್ರ ಚುನಾವಣಾ ಆಯೋಗ ಮುಖ್ಯ ಚುನಾವಣಾಧಿಕಾರಿಗಳಿಗೆ ಸೂಚಿಸಿದೆ.
