ಕೊಪ್ಪಳ, 10 ಡಿಸೆಂಬರ್(ಹಿ.ಸ):
ಆ್ಯಂಕರ್ : ಕನ್ನಡ ರಂಗಭೂಮಿಯ ಹಿರಿಯ ಕಲಾವಿದ ಬಾಬಣ್ಣ ಕಲ್ಮನಿ ಅವರ ನಿಧನಕ್ಕೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಶೋಕ ಸಂತಾಪ ಸೂಚಿಸಿದ್ದಾರೆ.
ನನ್ನದೇ ಜಿಲ್ಲೆಯವರಾದ ಕುಕನೂರಿನ ಬಾಬಣ್ಣ ಕಲ್ಮನಿ ಅವರು ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ದೊಡ್ಡ ಹೆಸರು ಮಾಡಿದ ಕಲಾವಿದರು, ಕನ್ನಡ ರಂಗಭೂಮಿಗೆ ಅವರು ಕೊಟ್ಟ ಕೊಡುಗೆ ಅನನ್ಯವಾದದ್ದು. ಬಾಲ್ಯದಿಂದಲೇ ಕನ್ನಡ ರಂಗಭೂಮಿಗೆ ಪಾದಾರ್ಪಣೆ ಮಾಡಿದ ಬಾಬಣ್ಣ ಕಲ್ಮನಿ ಅವರಿಗೆ ರಂಗಭೂಮಿಯೇ ಜೀವನವಾಗಿತ್ತು. ಅವರು ಆರಂಭಿಸಿದ ಲಲಿತ ಕಲಾ ನಾಟ್ಯ ಸಂಘ ಅನೇಕ ಜನಪ್ರಿಯ ನಾಟಕಗಳ ಮೂಲಕ ದೊಡ್ಡ ಹೆಸರು ಮಾಡಿತ್ತು.
ಸ್ತ್ರೀ ಪಾತ್ರ ಹಾಗೂ ಪುರುಷ ಪಾತ್ರ ಎರಡರಲ್ಲೂ ತಮ್ಮ ಪ್ರತಿಭೆಯನ್ನು ಮೆರೆದಂತಹ ಹಿರಿಮೆ ಬಾಬಣ್ಣ ಕಲ್ಮನಿ ಅವರದ್ದು, 1993ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದ ಬಾಬಣ್ಣ ಕಲ್ಮನಿ ಅವರಿಗೆ 2021 -22ನೇ ಸಾಲಿನ ಪ್ರತಿಷ್ಠಿತ ಗುಬ್ಬಿ ವೀರಣ್ಣ ಪ್ರಶಸ್ತಿ ಘೋಷಿಸಲಾಗಿತ್ತು.
ಪ್ರಶಸ್ತಿ ಪ್ರದಾನಕ್ಕೆ ಮುನ್ನವೇ ಅವರು ದೈವಾಧೀನರಾದದ್ದು ಅತ್ಯಂತ ದುರ್ದೈವದ ಸಂಗತಿ. ಇದು ನನಗೆ ಅತ್ಯಂತ ನೋವುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ವರ್ಗಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು..
