ಬಳ್ಳಾರಿ, 9 ಡಿಸೆಂಬರ್(ಹಿ.ಸ):
ಆ್ಯಂಕರ್ : ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯಲು ಡಿಸೆಂಬರ್ 22 ರ ಶುಕ್ರವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ರಾಜ್ಯಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರಿ ಪದವಿಪೂರ್ವ ಕಾಲೇಜುಗಳ ‘ಅತಿಥಿ’ ಉಪನ್ಯಾಸಕರ ಸಂಘಟನೆ ತಿಳಿಸಿದೆ.
ಸರ್ಕಾರಿ ಪದವಿಪೂರ್ವ ಕಾಲೇಜುಗಳ ‘ಅತಿಥಿ’ ಉಪನ್ಯಾಸಕರ ಸಂಘಟನೆಯ ರಾಜ್ಯ ಜಂಟಿ ಕಾರ್ಯದರ್ಶಿ ಎಸ್.ಜಿ. ನಾಗರತ್ನ, ಜಿಲ್ಲಾ ಸಮಿತಿಯ ರಂಗಣ್ಣ, ಚಂದ್ರಪ್ಪ, ಚಿದಾನಂದ, ರಾಘವೇಂದ್ರ ಅವರು ಸುದ್ದಿಗಾರರಿಗೆ ಶನಿವಾರ ಮಾಹಿತಿ ನೀಡಿದರು.
ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಮಾಸಿಕ ಗೌರವಧನವನ್ನು ಕನಿಷ್ಠ ರೂ. 25,000 ಗಳಿಗೆ ಹೆಚ್ಚಿಸಬೇಕು. ಮಾಸಿಕ ಗೌರವಧನ ಪ್ರತಿ ತಿಂಗಳು ಐದನೇ ತಾರೀಖಿನೊಳಗಾಗಿ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗಿ ಸೇವೆ ಶೈಕ್ಷಣಿಕ ವರ್ಷ ಪೂರ್ಣಗೊಳ್ಳುವವರೆಗೂ ಮುಂದುವರೆಸಬೇಕು.
ಪದವಿಪೂರ್ವ ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ವಾರಕ್ಕೆ ಕೇವಲ 10 ಗಂಟೆಗಳ ಕಾರ್ಯಭಾರವನ್ನು ಮಾತ್ರ ನೀಡಬೇಕು. ಪ್ರತಿ ವರ್ಷವೂ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಮೆರಿಟ್ ಜೊತೆಯಲ್ಲಿ ಸೇವಾ ಅನುಭವವನ್ನು ಪರಿಗಣಿಸಬೇಕು. ದಸರಾ ರಜೆಗಳಿಗೆ ಗೌರವಧನ ಪಾವತಿಸಬೇಕು.
ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂ ಮಾಡುತ್ತೇವೆ ಎಂದಿದ್ದ ಕಾಂಗ್ರೆಸ್ನ ಪ್ರಣಾಳಿಕೆಯನ್ನು ಜಾರಿ ಮಾಡಬೇಕು.
ಪದವಿಪೂರ್ವ ಶಿಕ್ಷಣ ಇಲಾಖೆಯ ಸರ್ಕಾರಿ ನೇಮಕಾತಿಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಮೊದಲು ಆದ್ಯತೆ ನೀಡಬೇಕು. ನಮ್ಮ ಸೇವಾ ಅನುಭವವನ್ನು ಪರಿಗಣಿಸಿ ಕೃಪಾಂಕ ನೀಡಬೇಕು
ಅತಿಥಿ ಉಪನ್ಯಾಸಕರಿಗೆ ಗುರುತಿನ ಚೀಟಿ ಹಾಗೂ ಪ್ರತಿ ವರ್ಷವೂ ಸೇವಾ ಪ್ರಮಾಣಪತ್ರ ನೀಡಬೇಕು. ಖಾಯಂ ಉಪನ್ಯಾಸಕರನ್ನು ನಿಯೋಜನೆ ಹಾಗೂ ವರ್ಗಾವಣೆ ಮಾಡಿದಾಗ ಅತಿಥಿ ಉಪನ್ಯಾಸಕರನ್ನು ಯಾವುದೇ ಕಾರಣಕ್ಕೂ ಕೈ ಬಿಡಬಾರದು. ಅತಿಥಿ ಉಪನ್ಯಾಸಕರಿಗೆ ಸೂಕ್ತ ಕೆಲಸವನ್ನು ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಅಥವಾ ಸರ್ಕಾರಿ ಇಲಾಖೆಯಲ್ಲಿ ತಾತ್ಕಾಲಿಕವಾಗಿ ಹುದ್ದೆ ನೀಡಬೇಕು.
ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ, ವರ್ಗಾವಣೆಗೊಂಡಿರುವ ಅಥವಾ ಕಡಿಮೆ ಉಪನ್ಯಾಸಕರಿರುವ ಎಲ್ಲಾ ಕಾಲೇಜುಗಳಲ್ಲಿ ಅಗತ್ಯವಿರುವಷ್ಟು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಬೇಕು. ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಲೆಕ್ಕಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ (ಅಕೌಂಟೆನ್ಸಿ ಮತ್ತು ಬಿಸಿನೆಸ್ ಸ್ಟಡೀಸ್) ವಿಷಯವಿದ್ದು, ಎರಡು ವಿಷಯಗಳಿಗೂ ಪ್ರತ್ಯೇಕ ನೇಮಕಾತಿಗಳಾಗಬೇಕು.
ಅತಿಥಿ ಉಪನ್ಯಾಸಕರನ್ನು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳ ಮೌಲ್ಯಮಾಪಕರಾಗಿ ನೇಮಿಸುವುದನ್ನು ಮುಂದುವರಿಸಬೇಕು. ಪದವಿಪೂರ್ವ ಶಿಕ್ಷಣ ಇಲಾಖೆಯ ಅಸ್ಮಿತೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಪದವಿಪೂರ್ವ ಶಿಕ್ಷಣ ಇಲಾಖೆಯನ್ನು ಶಾಲಾ ಶಿಕ್ಷಣ ಇಲಾಖೆಯೊಂದಿಗೆ ವಿಲೀನಗೊಳಿಸಬಾರದು ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯ ಮೇಲುಸ್ತುವಾರಿಯನ್ನು ಜಿಲ್ಲಾ ಪಂಚಾಯಿತಿಗಳಿಗೆ ನೀಡಬಾರದು ಎಂದು ಅವರು ಆಗ್ರಹಿಸಿದರು.
ತಮ್ಮ ಬೇಡಿಕೆಗಳ ಈಡೇರಿಕೆಗೆ ಕೈಗೊಳ್ಳಬೇಕಾದ ಹೋರಾಟಗಳ ಕುರಿತು ರಾಜ್ಯಮಟ್ಟದ ಸಮಾವೇಶದಲ್ಲಿ ಚರ್ಚೆ ನಡೆಸಿ, ಭವಿಷ್ಯದ ಹೋರಾಟಗಳನ್ನು ರೂಪಿಸಲಾಗುತ್ತದೆ ಎಂದು ಅವರು ಹೇಳಿದರು.
