ಬೆಂಗಳೂರು, 8 ಡಿಸೆಂಬರ್(ಹಿ.ಸ):
ಆ್ಯಂಕರ್ : ಎಲ್. ಆರ್. ಈಶ್ವರಿ ಅವರ ಪೂರ್ಣ ಹೆಸರು ಲೋರ್ಡಿ ಮೇರಿ ರಾಜೇಶ್ವರಿ. ಅಂದಿನ ಕಾಲದಲ್ಲಿ ಎಂ. ಎಸ್. ರಾಜೇಶ್ವರಿ ಎಂಬ ಪ್ರಸಿದ್ಧ ಗಾಯಕಿ ಒಬ್ಬರು ಇದ್ದುದರಿಂದ ಇವರು ತಮ್ಮ ಹೆಸರನ್ನು ಎಲ್. ಆರ್. ಈಶ್ವರಿ ಎಂದ ಕಿರಿದು ಮಾಡಿಕೊಂಡರು. ಎಲ್ ಆರ್. ಈಶ್ವರಿ ಅವರಿಗೆ ಸಾಂಪ್ರದಾಯಿಕ ಸಂಗೀತದ ಶಿಕ್ಷಣ ಪಾಠವೇನೂ ದಕ್ಕಲಿಲ್ಲ ಆದರೂ ಆ ದ್ವನಿ ಅಂತರಾಳವನ್ನು ತಟ್ಟುವ ಮಾದಕತೆಯ ಮೋಡಿ ಅವರ್ಣನೀಯವಾದದ್ದು. ಅಂತಹ ದ್ವನಿ ಹೊಂದಿದವರು ಬಹಳ ಬಹಳ ಅಪರೂಪ. ಅಂತಹ ಅಪರೂಪದ ದ್ವನಿ ಎಲ್. ಆರ್. ಈಶ್ವರಿ. ಎಲ್. ಆರ್ ಈಶ್ವರಿ ಎಂದರೆ ತಕ್ಷಣ ನೆನಪಿಗೆ ಬರುವ ಹಾಡೆಂದರೆ ‘ಜೋಕೆ, ನಾನು ಬಳ್ಳಿಯ ಮಿಂಚು, ಕಣ್ಣು ಕತ್ತಿಯ ಅಂಚು’. ಎಲ್. ಆರ್. ಈಶ್ವರಿ ಅವರ ಉಚ್ಚಾರದಲ್ಲಿ ಈ ಗೀತೆ ನೀಡುವ ಸೊಬಗು ವಿಶಿಷ್ಟವಾದದ್ದು. ಕುಳ್ಳ ಎಜಂಟ್ 000 ಚಿತ್ರದಲ್ಲಿ ‘ಸಿಂಗಾಪುರಿಂದ ಬಂದೆ ಬಂಗಾರ ಹೊತ್ತು ತಂದೆ, ಸಂಗಾತಿ ನೀ ಇಲ್ಲಿ ಬಾ ಬಾ’ ಎಂಬಲ್ಲಿನ ತುಂಟಾಟದ ಹಾಡು ಆಲಿಸುವ ಕಿವಿಗಳಿಗೆ ಹುಟ್ಟಿಸುವ ಸಂತೋಷ ಅಪ್ರತಿಮವಾದದ್ದು. ‘ಸಿಟ್ಯಾಕೋ ಸಿಡುಕ್ಯಾಕೋ ನನ ಜಾಣ’, ಇಟ್ಟಾಯ್ತೋ ನಿನ ಮೇಲೆ ನನ ಪ್ರಾಣ’, ‘ದೂರದಿಂದ ಬಂದಂತ ಸುಂದರಾಂಗ ಜಾಣ’, ‘ಬಾಜಿ ಕಟ್ಟಿ ನೋಡು ಬಾರೋ ಮೀಸೆ ಮಾವ’, ‘ನಮ್ಮೂರನಾಗ ನಾನೊಬ್ನೆ ಜಾಣ’, ‘ಭಾಮ, ಭಾಮಾ ನೀನರಿಯೆ ಮನದ ಮರ್ಮ’, ‘ರಸಿಕ, ರಸಿಕ, ನೀ ಮೆಲ್ಲನೆ ಓಲಾಡು, ರಸದ ನಿಮಿಷ’, ‘ಸುಮ ಬಾಲೆಯ ಪ್ರೇಮದ ಸಿರಿಯೆ’, ‘ದೂರದಿಂದ ಬಂದವರೇ, ಬಾಗಿಲಲಿ ನಿಂದವರೆ, ಮಂದಿರವು ಚೆನ್ನಿದೆಯೇ ಆರಾಮವಾಗಿದೆಯೇ’, ‘ಅಯ್ಯಯ್ಯಯ್ಯೋ ಹಳ್ಳೀಮುಖ, ಯಾವಾಗ್ ಬಂದೆ ಬೆಂಗಳೂರ್ ಪಕ್ಕ, ‘ಆಶಾವಿಲಾಸಿ ಈ ರೂಪರಾಶಿ’, ‘ಮಾಡರ್ನ್ ಲೇಡಿಯ ನೋಡಿ ನೀವು ಕಣ್ ಕಣ್ ಬಿಡಬೇಡಿ’ ಹೀಗೆ ಅವರ ಹಾಡುಗಳು ಒಂದಕ್ಕಿಂತ ಒಂದು ಸಂಗೀತ ಪ್ರಿಯರನ್ನೂ ಬಹಳ ಹಲವು ದಶಕಗಳಿಂದ ಹಿಡಿದಿಟ್ಟಿದೆ. ಅಂತೆಯೇ ದಕ್ಷಿಣ ಭಾರತದ ಪ್ರೇಕ್ಷಕರಿಗೆಲ್ಲ ಮೋಡಿ ಮಾಡಿದ ‘ಹಲೋ ಮೈ ಡಿಯರ್ ರಾಂಗ್ ನಂಬರ್’ ಇವೆಲ್ಲ ಹುಟ್ಟಿಸಿದ ಜನಪ್ರೀತಿ ಅಸಾಧಾರಣವಾದದ್ದು. ಅವರ ದ್ವನಿಯಲ್ಲಿ ಮೂಡಿದ ‘ಆದಿ ದೇವ, ಆದಿ ಮೂಲ, ಆದಿ ಬ್ರಹ್ಮ ಜೋ ಜೋ, ಪರಮ ಪುರುಷ ಪರಬ್ರಹ್ಮ ಪರಮೇಶ್ವರ ಜೋ ಜೋ’ ಎಂಬ ಭಕ್ತಿಗೀತೆ ಕೂಡಾ ಜನಪ್ರಿಯವಾಗಿದೆ. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಧ್ವನಿ ಮೂಡಿಸಿದ ಎಲ್ ಆರ್ ಈಶ್ವರಿ ಹಾಡಿದ ಸಂಖ್ಯೆಗಳಿಗೆ ಲೆಕ್ಕವೇ ಇಲ್ಲ. ಅಷ್ಟೊಂದು ಹಾಡುಗಳು ಅವರ ದ್ವನಿಯಲ್ಲಿ ಮೂಡಿಬಂದಿವೆ. ಚಲನಚಿತ್ರಗಳಲ್ಲಿ ಮಾದಕ, ತುಂಟಾಟದ ಹಾಡುಗಳನ್ನು ಎಷ್ಟು ಹಾಡಿದ್ದಾರೋ ಅದಕ್ಕೆ ಸರಿಸಮವಾಗಿ ಭಕ್ತಿಗೀತೆಗಳನ್ನೂ ಹಾಡಿದ್ದಾರೆ. ಶೀಘ್ರಗತಿಯಲ್ಲಿ ಸಾಗುವ ಹಾಡುಗಳಿಗೆ ಅವರದ್ದು ಹೇಳಿ ಮಾಡಿಸಿದಂತಹ ಧ್ವನಿ ಎಂಬ ಅಭಿಪ್ರಾಯ ಚಿತ್ರರಂಗದಲ್ಲಿ ರೂಢಿಯಲ್ಲಿತ್ತು.
ಮಾಹಿತಿ-ಪರಮ್ ಗುಬ್ಬಿ ಸರ್.
ಹಿಂದೂಸ್ತಾನ್ ಸಮಾಚಾರ್
