ಪುಣೆ, 30 ನವೆಂಬರ್ (ಹಿ.ಸ):
ಆ್ಯಂಕರ್ :
ಭಾರತ್ ಗೌರವ್ ರೈಲಿನಲ್ಲಿ ವಿಷಪೂರಿತ ಆಹಾರ ಸೇವಿಸಿ 90 ಮಂದಿ ಪ್ರಯಾಣಿಕರು ಆಸ್ಪತ್ರೆಗೆ ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ. ತಡರಾತ್ರಿ ಪುಣೆ ರೈಲ್ವೆ ನಿಲ್ದಾಣಕ್ಕೆ ತಲುಪುವುದಕ್ಕೂ ಮುನ್ನ ಭಾರತ್ ಗೌರವ್ ವಿಶೇಷ ರೈಲಿನಲ್ಲಿ ಚೆನ್ನೈನಿಂದ ಪ್ರಯಾಣಿಸುತ್ತಿದ್ದ ಸುಮಾರು 90 ಪ್ರಯಾಣಿಕರು ಹೊಟ್ಟೆ ನೋವು ಹಾಗೂ ಇನ್ನಿತರೆ ಸಮಸ್ಯೆಗಳನ್ನು ಅನುಭವಿಸಿದರು. ಹಾಗಾಗಿ ವಿಷಪೂರಿತ ಆಹಾರ ಸೇವನೆಯಿಂದ ಹಾಗಾಗಿರಬಹುದು ಎನ್ನಲಾಗಿದೆ.
ಚೆನ್ನೈನಿಂದ ಗುಜರಾತ್ನ ಪಾಲಿಟಾನಾಗೆ ಪ್ರಯಾಣಿಸುತ್ತಿದ್ದ ಭಾರತ್ ಗೌರವ್ ಯಾತ್ರಾ ವಿಶೇಷ ಪ್ಯಾಕೇಜ್ ರೈಲಿನಲ್ಲಿ ಭಾರತೀಯ ರೈಲ್ವೇ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಅಡುಗೆ ಗುತ್ತಿಗೆದಾರರು ನೀಡಿದ ಭೋಜನವನ್ನು ಸೇವಿಸಿದ ನಂತರ 90 ಮಂದಿಗೆ ಅನಾರೋಗ್ಯ ಕಾಡಿತ್ತು.
ಅನೇಕ ಪ್ರಯಾಣಿಕರು ವಾಂತಿ ಮತ್ತು ಭೇದಿಯಿಂದ ಬಳಲುತ್ತಿದ್ದರು, ಗುಜರಾತ್ನ ಪಾಲಿಟಾನಾಗೆ ಹೋಗುವ ರೈಲು ಪುಣೆ ರೈಲು ನಿಲ್ದಾಣದಲ್ಲಿ ತುರ್ತು ನಿಲುಗಡೆ ಮಾಡಲಾಯಿತು. ರೈಲಿನ ಸ್ನಾನಗೃಹಗಳನ್ನು ಸ್ವಚ್ಛಗೊಳಿಸಲಾಯಿತು. ಕಲ್ಯಾಣ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಬೇಕು ಎಂಬ ಸೂಚನೆಯೊಂದಿಗೆ ರೈಲು ಹೊರಟಿತು.
ರೂಬಿ ಹಾಲ್ ಕ್ಲಿನಿಕ್ ರೈಲ್ವೆ ಆಸ್ಪತ್ರೆ ಮತ್ತು ಸಾಸೂನ್ ಜನರಲ್ ಆಸ್ಪತ್ರೆಯ ವೈದ್ಯರು ಒಟ್ಟು 99 ರೋಗಿಗಳನ್ನು ಪರೀಕ್ಷಿಸಿದರು ಮತ್ತು ಎಲ್ಲಾ ರೋಗಿಗಳ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
