
ರಾಯಚೂರು, 18 ನವೆಂಬರ್ (ಹಿ.ಸ):
ಆ್ಯಂಕರ್ : ಜಿಲ್ಲಾಡಳಿತ, ತಾಲೂಕ ಆಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಮತ್ತು ಪೊಲೀಸ್ ಇಲಾಖೆರವರ ಸಂಯೋಗದಲ್ಲಿ ರಾಯಚೂರು ತಾಲೂಕಿನ ವಿವಿಧ ಹೋಟೆಲ್, ಗ್ಯಾರೇಜ್, ಬೇಕರಿ, ಅಂಗಡಿ, ಬಾರ್&ರೆಸ್ಟೋರೆಂಟ್ ಮತ್ತು ಇನ್ನಿತರ ವಾಣಿಜ್ಯ ಉದ್ದಿಮೆಗಳಲ್ಲಿ ತಪಾಸಣೆ ಕೈಗೊಂಡಾಗ ಟ್ರೀನಿಟಿ ಟಿಫನ್ಸ್ ಮತ್ತು ಫಾಸ್ಟ್ ಫುಡ್ ಸೆಂಟರ್ ರಾಯಚೂರುನಲ್ಲಿ ಕೆಲಸ ಮಾಡುತ್ತಿದ್ದ ಮಗುವನ್ನು ರಕ್ಷಣೆ ಮಾಡಿ, ಮಕ್ಕಳ ಕಲ್ಯಾಣ ಸಮಿತಿ ರಾಯಚೂರಿಗೆ ಒಪ್ಪಿಸಲಾಗಿದೆ.
ಮಗುವನ್ನು ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದ ಟ್ರೀನಿಟಿ ಟಿಫನ್ಸ್ ಮತ್ತು ಫಾಸ್ಟ್ ಫುಡ್ ಸೆಂಟರ್ನ ಮಾಲೀಕರ ವಿರುದ್ಧ ಪಶ್ಚಿಮ ಪೊಲೀಸ್ ಠಾಣೆ ರಾಯಚೂರುನಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.
ದಾಳಿಯ ತಂಡದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮಂಜುನಾಥರೆಡ್ಡಿ, ಕಾರ್ಮಿಕ ನಿರೀಕ್ಷಕ ಎನ್.ವೆಂಕಟಸ್ವಾಮಿ,ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಹುಸೇನ್ಬಾಷಾ,ಪಶ್ಚಿಮ ಪೊಲೀಸ್ ಠಾಣೆಯ ಎಎಸ್ಐ ಜಗನ್ನಾಥ್ ಡಾಂಗೆ, ಖಾಜಾಬಿ, ತಾಯ್ರಾಜ್, ಮಲ್ಲಮ್ಮ ಪಾಲ್ಗೊಂಡಿದ್ದರು.
ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 2016 ರಂತೆ 14 ವರ್ಷದೊಳಗಿನ ಮಕ್ಕಳ ದುಡಿಮೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹಾಗೂ 15 ರಿಂದ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಒಂದು ವೇಳೆ ದುಡಿಸಿಕೊಂಡಲ್ಲಿ ರೂ. 50,000/- ದಂಡ ಹಾಗೂ 2 ವರ್ಷ ಜೈಲು ಶಿಕ್ಷೆ ಇರುತ್ತದೆ. ವಾಹನಗಳಲ್ಲಿ ಮಕ್ಕಳನ್ನು ಕೃಷಿ ಚಟುವಟಿಕೆಗಳಿಗಾಗಿ ಅಕ್ರಮ ಮತ್ತು ಕಾನೂನು ಬಾಹಿರವಾಗಿ ಸಾಗಾಣಿಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ, ಕಾರಣ ಮಕ್ಕಳನ್ನು ದುಡಿಸಿಕೊಳ್ಳಬಾರದೆಂದು ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.
