ದೆಹಲಿ , 16ನವೆಂಬರ್ (ಹಿ.ಸ):
ಆ್ಯಂಕರ್ :
ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಈಗಾಗಲೇ ಮೊದಲ ಸೆಮಿಫೈನಲ್ ಮುಕ್ತಾಯಗೊಂಡಿದ್ದು, ನ್ಯೂಝಿಲೆಂಡ್ ವಿರುದ್ಧ 70 ರನ್ಗಳ ಅಮೋಘ ಜಯ ಸಾಧಿಸಿ ಟೀಮ್ ಇಂಡಿಯಾ ಫೈನಲ್ಗೆ ಲಗ್ಗೆಯಿಟ್ಟಿದೆ. ಇಂದು ದ್ವಿತೀಯ ಸೆಮಿಫೈನಲ್ ಏರ್ಪಡಿಸಲಾಗಿದೆ. ಈ ಪಂದ್ಯವನ್ನು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆಯೋಜಿಸಲಾಗಿದ್ದು, ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ಮತ್ತು ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಆಗಲಿವೆ. ಇಲ್ಲಿ ಗೆದ್ದ ತಂಡ ಫೈನಲ್ನಲ್ಲಿ ಭಾರತ ವಿರುದ್ಧ ಪ್ರಶಸ್ತಿಗೆ ಹೋರಾಡಲಿದೆ.
ದಕ್ಷಿಣ ಆಫ್ರಿಕಾ ತಂಡ:
ಸೆಮೀಸ್ಗು ಮುನ್ನ ಹರಿಣಗಳ ಪಡೆಗೆ ದೊಡ್ಡ ಆಘಾತ ಉಂಟಾಗಿದೆ. ತಂಡದ ನಾಯಕ ಟೆಂಬಾ ಬವುಮಾ ಇಂದು ಆಡುವುದು ಅನುಮಾನ. ಅಫ್ಘಾನಿಸ್ತಾನ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಇವರು ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದರು. ಪ್ರೋಟೀಸ್ ತಂಡವು ತಮ್ಮ ವಿಶ್ವಕಪ್ 2023 ರ ಅಭಿಯಾನದ ಉದ್ದಕ್ಕೂ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಪರಾಕ್ರಮ ಮೆರೆದಿದೆ. ತಂಡ ಎಲ್ಲ ಆಟಗಾರರು ಸಮನಾಗಿ ಕೊಡುಗೆ ನೀಡುತ್ತಿದ್ದಾರೆ. ಕ್ವಿಂಟನ್ ಡಿ ಕಾಕ್, ಹೆನ್ರಿಚ್ ಕ್ಲಾಸೆನ್, ಏಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್ ಬ್ಯಾಟಿಂಗ್ನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ, ದಕ್ಷಿಣ ಆಫ್ರಿಕಾ ಮಾರಕವಾಗಿದೆ. ಜಾನ್ಸೆನ್ ಮತ್ತು ರಬಾಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಸ್ಪಿನ್ನರ್ ಕೇಶವ್ ಮಹಾರಾಜ್ ನಂಬರ್ ಒನ್ ಬೌಲರ್ ಆಗಿದ್ದಾರೆ.
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ಆಸ್ಟ್ರೇಲಿಯಾ ತಂಡ:
ಆಸೀಸ್ ತನ್ನ ಬ್ಯಾಟಿಂಗ್ ವಿಭಾಗದ ಮೇಲೆ ಹೆಚ್ಚು ಅವಲಂಬಿತರಾಗಿದೆ. ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್ ಕ್ರಿಕೆಟ್ ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ವಾರ್ನರ್ ಈಗಾಗಲೇ 9 ಪಂದ್ಯಗಳಿಂದ 499 ರನ್ ಗಳಿಸಿದ್ದಾರೆ. ಸ್ಟೀವ್ ಸ್ಮಿತ್ ಕಡೆಯಿಂದ ಸೆಮೀಸ್ನಲ್ಲಿ ಒಂದೊಳ್ಳೆ ಇನ್ನಿಂಗ್ಸ್ ಬರಬೇಕು. ಗ್ಲೆನ್ ಮ್ಯಾಕ್ಸ್ವೆಲ್ ಅಫ್ಘಾನಿಸ್ತಾನ ವಿರುದ್ಧ ದ್ವಿಶತಕ ಸಿಡಿಸಿ ಅಬ್ಬರಿಸಿದ್ದರು. ಬೌಲಿಂಗ್ ವಿಭಾಗಕ್ಕೆ ಸಂಬಂಧಿಸಿದಂತೆ, ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್ವುಡ್, ಸೀನ್ ಅಬಾಟ್, ಮಾರ್ಕಸ್ ಸ್ಟೊಯಿನಿಸ್ ಇದ್ದಾರೆ. ಆ್ಯಡಂ ಝಂಪಾ ಕೋಲ್ಕತ್ತಾದ ನಿಧಾನಗತಿಯ ಮತ್ತು ತಿರುವಿನ ಪಿಚ್ನಲ್ಲಿ ಮ್ಯಾಜಿಕ್ ಮಾಡಲು ಸಿದ್ದರಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
