
ಬೆಂಗಳೂರು , 14ನವೆಂಬರ್ (ಹಿ.ಸ):
ಆ್ಯಂಕರ್ :
ಖ್ಯಾತ ಓಬೇರಾಯ್ ಹೋಟೆಲ್ಸ್ ಸಂಸ್ಥೆಯ ಗೌರವಾಧ್ಯಕ್ಷರಾದ ಪೃಥ್ವಿರಾಜ್ ಸಿಂಗ್ ಓಬೇರಾಯ್ ಇಂದು ಮಂಗಳವಾರ ನಿಧನರಾಗಿದ್ದಾರೆ. ಇಬ್ಬರು ಪುತ್ರಿಯರು ಸೇರಿದಂತೆ ಅವರು ಮೂವರು ಮಕ್ಕಳನ್ನು ಅಗಲಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಅವರು ಸಾವನ್ನಪ್ಪಿರುವುದು ತಿಳಿದುಬಂದಿದೆ.
ಪೃಥ್ವಿರಾಜ್ ಒಬೇರಾಯ್ ಅವರು ಕೆಲ ವರ್ಷಗಳಿಂದ ಸಂಸ್ಥೆಯ ಗೌರವಾಧ್ಯಕ್ಷರಾಗಿದ್ದರು. ಓಬೇರಾಯ್ ಗ್ರೂಪ್ನ ಮಾಲೀಕ ಸಂಸ್ಥೆಯಾದ ಇಐಎಚ್ (ಈಸ್ಟ್ ಇಂಡಿಯಾ ಹೋಟೆಲ್ಸ್) ಲಿ ಸಂಸ್ಥೆಗೆ ಅವರು 2002ರಿಂದ 2013ರವರೆಗೂ ಛೇರ್ಮನ್ ಆಗಿ ಕಾರ್ಯನಿರ್ವಹಿಸಿದ್ದರು. ಓಬೇರಾಯ್ ಗ್ರೂಪ್ನ ಲಕ್ಷುರಿ ಹೋಟೆಲ್ ಮತ್ತು ರೆಸಾರ್ಟ್ಗಳ ವ್ಯವಹಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಶ್ರೇಯಸ್ಸು ಪೃಥ್ವಿರಾಜ್ ಅವರಿಗೆ ಸಲ್ಲಬೇಕು.
ಓಬೇರಾಯ್ ಗ್ರೂಪ್ನ ಸಂಸ್ಥಾಪಕ ಅಧ್ಯಕ್ಷ ಮೋಹನ್ ಸಿಂಗ್ ಒಬೇರಾಯ್ ಅವರ ಮಗನಾದ ಪೃಥ್ವಿರಾಜ್ ಸಿಂಗ್ ಓಬೇರಾಯ್ ಅವರಿಗೆ ಸರ್ಕಾರ 2008ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. 2013ರಲ್ಲಿ ಸಂಸ್ಥೆಯ ಛೇರ್ಮನ್ ಸ್ಥಾನ ತ್ಯಜಿಸಿ ಗೌರವಾಧ್ಯಕ್ಷರಾಗಿದ್ದರು. ಅವರ ಮಗ ವಿಕ್ರಮ್ ಎಸ್ ಓಬೇರಾಯ್ ಅವರು ಈಸ್ಟ್ ಇಂಡಿಯಾ ಹೋಟೆಲ್ಸ್ ಸಂಸ್ಥೆಯ ಸಿಇಒ ಮತ್ತು ಎಂಡಿಯಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
