
ನವದೆಹಲಿ,10ನವೆಂಬರ್ (ಹಿ.ಸ):
ಆ್ಯಂಕರ್ :ಮಾಲ್ಡೀವ್ಸ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೋಗ್ರೆಸ್ಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್ – ಪಿಪಿಎಂ ಪಕ್ಷದ ಅಭ್ಯರ್ಥಿ ಮೊಹಮ್ಮದ್ ಮುಯಿಝು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗಿದೆ.
ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.
ಮುಯಿಝು ಅವರು ನವೆಂಬರ್ ೧೭ರಂದು ಮಾಲ್ಡೀವ್ಸ್ ನ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಪ್ರಮಾಣ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರಿಗೆ ಆಹ್ವಾನ ಬಂದಿದೆ. ಆದರೆ ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಂಡ ನಂತರ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ತಿಳಿಸಿದ್ದಾರೆ.
ಕಳೆದ ಸೆಪ್ಟೆಂಬರ್ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮುಯಿಝು, ಹಾಲಿ ಅಧ್ಯಕ್ಷ ಇಬ್ರಾಹಿಂ ಸೋಲಿಹ್ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಮಾಲ್ಡೀವ್ಸ್ ಅಧ್ಯಕ್ಷರಾಗಿ ಆಯ್ಕೆಯಾದ ಮುಯಿಝು ಅವರಿಗೆ ಪ್ರಧಾನಿ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದರು. ಭಾರತ-ಮಾಲ್ಡೀವ್ಸ್ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಒಟ್ಟಾರೆ ಸಹಕಾರ ಹೆಚ್ಚಿಸಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ನೀಡಿದ್ದರು.
ಹಿಂದೂಸ್ತಾನ್ ಸಮಾಚಾರ್
