
ಕಠ್ಮಂಡು, 5 ನವೆಂಬರ್ (ಹಿ.ಸ):
ಆ್ಯಂಕರ್ :
ಪಶ್ಚಿಮ ನೇಪಾಳದಲ್ಲಿ ಮೊನ್ನೆ ಸಂಭವಿಸಿದ ಭೂಕಂಪದಿಂದ ಮೃತಪಟ್ಟವರ ಸಂಖ್ಯೆ ೧೫೭ ಕ್ಕೆ ತಲುಪಿದೆ. ನೇಪಾಳದ ಅಧಿಕಾರಿಗಳ ಪ್ರಕಾರ, ನೂರಾರು ಜನರು ಗಾಯಗೊಂಡಿದ್ದಾರೆ ಮತ್ತು ಕುಸಿದ ಮನೆಗಳು ಹಾಗೂ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಹಲವಾರು ಜನರು ಸಿಕ್ಕಿಬಿದ್ದಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಈ ಮಧ್ಯೆ, ರಕ್ಷಣಾ ಕಾರ್ಯ ಮುಂದುವರಿದಿದೆ. ಅಯೋಧ್ಯೆಯಿಂದ ಉತ್ತರಕ್ಕೆ ೨೨೭ ಕಿ.ಮೀ ಮತ್ತು ಕಠ್ಮಂಡುವಿನ ಪಶ್ಚಿಮ-ವಾಯುವ್ಯಕ್ಕೆ ೩೩೧ ಕಿ.ಮೀ ದೂರದಲ್ಲಿರುವ ಜಜರ್ಕೋಟ್ ಜಿಲ್ಲೆಯಲ್ಲಿ ೬.೪ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ವರದಿ ಮಾಡಿದೆ.
ಭಾರತ – ನೇಪಾಳ ಗಡಿಯ ಪಾಟ್ನಾ, ಕತಿಹಾರ್, ಪೂರ್ವ ಚಂಪಾರಣ್, ದರ್ಭಾಂಗ, ಮುಜಾಫರ್ಪುರ, ಪಶ್ಚಿಮ ಚಂಪಾರಣ್, ಸಸಾರಾಮ್, ನವಾಡಾ ಮತ್ತು ಇತರ ಹಲವಾರು ಜಿಲ್ಲೆಗಳಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಬಿಹಾರದ ವಿಪತ್ತು ನಿರ್ವಹಣಾ ಇಲಾಖೆ ವರದಿ ಮಾಡಿದೆ. ೫೦೦ ಕಿಲೋಮೀಟರ್ ದೂರದಲ್ಲಿರುವ ದೆಹಲಿಯಲ್ಲಿಯೂ ಭೂಕಂಪದ ಪ್ರಬಲ ಕಂಪನದ ಅನುಭವವಾಗಿದೆ. ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್, ಭೂಕಂಪದಿಂದ ಉಂಟಾದ ಭೀಕರ ಜೀವಹಾನಿ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ದುಃಖ ವ್ಯಕ್ತಪಡಿಸಿದ್ದಾರೆ. ಜತೆಗೆ ಭಾರತವು ನೇಪಾಳದ ಜನರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತದೆ ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಸಿದ್ಧವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
