
ನವದೆಹಲಿ, 4 ನವೆಂಬರ್ (ಹಿ.ಸ):
ಆ್ಯಂಕರ್ :
ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಪ್ರದೇಶದ ರತ್ಲಂನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಕೂಡ ಮಧ್ಯಪ್ರದೇಶದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನರೇಂದ್ರ ಮೋದಿ ಅವರು ಇಂದು ರತ್ಲಂನಿಂದ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಾಲ್ವಾ ಪ್ರದೇಶದಲ್ಲಿ ಪ್ರಧಾನಿಯವರ ಮೊದಲ ಸಭೆ ಇದಾಗಿದೆ. ಸಂಜೆ ದೆಹಲಿಗೆ ತೆರಳಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಶಿವಪುರಿ, ಶಿಯೋಪುರ ಮತ್ತು ಗ್ವಾಲಿಯರ್ ಜಿಲ್ಲೆಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಕೂಡ ಭಾರಿ ಜನಸಂಪರ್ಕ ಅಭಿಯಾನ ಆರಂಭಿಸಿದೆ. ಈ ಅಭಿಯಾನದ ಅಡಿಯಲ್ಲಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಮಲ್ ನಾಥ್ ಅವರು ಇಂದು ಕಟಂಗಿ ಮತ್ತು ಶಹಾಪುರದಲ್ಲಿ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಎರಡು ಸಾವಿರದ ೫೩೩ ಅಭ್ಯರ್ಥಿಗಳಿದ್ದಾರೆ. ಇವರಲ್ಲಿ ಎರಡು ಸಾವಿರದ ೨೮೦ ಪುರುಷರು, ೨೫೨ ಮಹಿಳೆಯರು ಮತ್ತು ಒಬ್ಬ ಅಭ್ಯರ್ಥಿ ತೃತೀಯಲಿಂಗಿ. ಇದೇ ತಿಂಗಳ ೧೭ರಂದು ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ ಎಂದು ನಮ್ಮ ಬಾತ್ಮೀದಾರರು ವರದಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
