


ಬಳ್ಳಾರಿ, 27 ನವೆಂಬರ್ (ಹಿ.ಸ):
ಆ್ಯಂಕರ್ : ವಿಶೇಷ ಚೇತನರು ಸಂವಿಧಾನಾತ್ಮಕವಾಗಿ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಪಡೆದು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನಿ ಅವರು ಕರೆ ನೀಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ವಿಕಲಚೇತನರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ವಿಮ್ಸ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ವಿಕಲಚೇತನರ ಕ್ರೀಡಾ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಕಲಚೇತನರಾಗಿದ್ದರೂ ಬಹಳಷ್ಟು ಮಂದಿ ಐಎಎಸ್ ಇನ್ನಿತರೆ ಸ್ಪರ್ಧಾತ್ಮಕ ಪರೀಕ್ಷೆಯನ್ನೂ ಪಾಸ್ ಮಾಡಿದ್ದಾರೆ. ಪ್ಯಾರಾ ಒಲಂಪಿಕ್ ಕ್ರೀಡಾಕೂಟದಲ್ಲೂ ಉತ್ತಮ ಸಾಧನೆ ತೋರಿದ್ದಾರೆ. ಸಾಧನೆ ಮಾಡಬೇಕು ಎಂದು ಛಲ ಹೊಂದಿದ್ದರೆ ಅಂಗವೈಕಲ್ಯತೆ ಸಾಧನೆಗೆ ಅಡ್ಡಿಯಾಗಲಾರದು ಎಂದು ಹೇಳಿದರು.
ವಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ ಅವರು ಅಧ್ಯಕ್ಷತೆ ವಹಿಸಿದ್ದರು.
ವಿಕಲಚೇತನರಿಗೆ ಶ್ರವಣ ದೋಷವುಳ್ಳವರಿಗೆ 100ಮೀ ಓಟ, ಗುಂಡು ಎಸೆತ, ಜಾವಲಿನ್ ಥ್ರೋ ಸ್ಪರ್ಧೆ, ದೈಹಿಕ ವಿಕಲಚೇತನರಿಗೆ 100 ಮೀ ಓಟ, ಗುಂಡು ಎಸೆತ, ಬುದ್ಧಿಮಾಂದ್ಯರಿಗೆ 100 ಮೀ. ಓಟ, ಮ್ಯೂಜಿಕಲ್ ಚೇರ್ ಸ್ಪರ್ಧೆ ಆಯೋಜಿಸಲಾಗಿತ್ತು. ದೃಷ್ಟಿದೋಷ ಮತ್ತು ದೈಹಿಕ ವಿಕಲಚೇತನರು ಮತ್ತು ಬುದ್ದಿಮಾಂದ್ಯವಿರುವವರಿಗೆ ಜಾನಪದ ಗೀತೆ, ಭಾವಗೀತೆ, ಭಕ್ತಿಗೀತೆ ಸ್ಪರ್ಧೆಗಳು ನಡೆದವು.
ವಿಮ್ಸ್ ಅಧೀಕ್ಷಕ ಸೋಮಶೇಖರ್, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗೋವಿಂದಪ್ಪ ಸೇರಿದಂತೆ ವಿಕಲಚೇತನರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಘ ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು ಹಾಗೂ ಸಾರ್ವಜನಿಕರು, ಮತ್ತಿತರು ಉಪಸ್ಥಿತರಿದ್ದರು.
