ಇಂದೋರ್, 14 ಜನವರಿ(ಹಿ.ಸ):
ಆ್ಯಂಕರ್ :
ಭಾರತ ಮತ್ತು ಅಫ್ಘಾನಿಸ್ತಾನ್ ತಂಡಗಳ ನಡುವಣ 2ನೇ ಟಿ20 ಪಂದ್ಯವು ಇಂದು ನಡೆಯಲಿದೆ. ಇಂದೋರ್ನ ಹೋಲ್ಕರ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದರೆ ಸರಣಿ ವಶಪಡಿಸಿಕೊಳ್ಳಬಹುದು. ಏಕೆಂದರೆ ಮೂರು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್ನಲ್ಲಿ ಟೀಮ್ ಇಂಡಿಯಾ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು.
ಇದೀಗ 1-0 ಅಂತರದಿಂದ ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾಗೆ ಇಂದಿನ ಪಂದ್ಯದ ಮೂಲಕ ಸರಣಿ ಗೆಲ್ಲುವ ಅವಕಾಶವಿದೆ. ಅತ್ತ ಸರಣಿ ಆಸೆಯನ್ನು ಜೀವಂತವಿರಿಸಿಕೊಳ್ಳಲು ಅಫ್ಘಾನಿಸ್ತಾನ್ ಇಂದು ಗೆಲ್ಲಲೇಬೇಕು. ಹೀಗಾಗಿ ಅಫ್ಘಾನ್ ಪಡೆಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿ ಮಾರ್ಪಟ್ಟಿದೆ.
ಕಿಂಗ್ ಕೊಹ್ಲಿ ಕಂಬ್ಯಾಕ್:
ಮೊದಲ ಪಂದ್ಯದಿಂದ ಹೊರಗುಳಿದಿದ್ದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಈ ಮ್ಯಾಚ್ ಮೂಲಕ ಟಿ20 ಕ್ರಿಕೆಟ್ಗೆ ಕಂಬ್ಯಾಕ್ ಮಾಡಲಿದ್ದಾರೆ. 2022ರಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಕೊನೆಯ ಬಾರಿಗೆ ಕಣಕ್ಕಿಳಿದಿದ್ದ ಕೊಹ್ಲಿ ಆ ಬಳಿಕ ಭಾರತ ಪರ ಟಿ20 ಕ್ರಿಕೆಟ್ ಆಡಿರಲಿಲ್ಲ. ಇದೀಗ 14 ತಿಂಗಳುಗಳ ಬಳಿಕ ಮತ್ತೊಮ್ಮೆ ಚುಟುಕು ಕ್ರಿಕೆಟ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ.
ಎಷ್ಟು ಗಂಟೆಗೆ ಪಂದ್ಯ ಶುರು?
ಇಂದೋರ್ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಶುರುವಾಗಲಿದೆ. ಅದಕ್ಕೂ ಮುನ್ನ 6.30 ಕ್ಕೆ ಟಾಸ್ ಪ್ರಕ್ರಿಯೆ ಜರುಗಲಿದೆ.
ಯಾವ ಚಾನೆಲ್ನಲ್ಲಿ ನೇರ ಪ್ರಸಾರ?
ಈ ಪಂದ್ಯದ ನೇರ ಪ್ರಸಾರವು ಸ್ಪೋರ್ಟ್ಸ್ 18 ಚಾನೆಲ್ನಲ್ಲಿ ಇರಲಿದೆ. ಹಾಗೆಯೇ ಜಿಯೋ ಸಿನಿಮಾ ಆ್ಯಪ್ನಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.
ಹಿಂದೂಸ್ತಾನ್ ಸಮಾಚಾರ್
