ಹೈದರಾಬಾದ್, 21 ಜನವರಿ(ಹಿ.ಸ):
ಆ್ಯಂಕರ್ :
ಹೊಸ ವರ್ಷ 2024ರ ಮೊದಲ 20 ದಿನಗಳಲ್ಲಿ ಭಾರತ ಕ್ರಿಕೆಟ್ ತಂಡ ಭರ್ಜರಿ ಪ್ರದರ್ಶನ ತೋರಿದೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಸಾಧ್ಯವಾಗಲಿಲ್ಲ, ಆದರೆ ಸಮಬಲ ಸಾಧಿಸಿತು. 2024 ರ ಟಿ20 ವಿಶ್ವಕಪ್ಗೆ ಮೊದಲು ಅಫ್ಘಾನ್ ವಿರುದ್ಧ ಕೊನೆಯ ಟಿ20 ಸರಣಿ ಆಡಿ ಯಶಸ್ಸು ಸಾಧಿಸಿತು. ಇದೀಗ ಮತ್ತೊಂದು ಕಠಿಣ ಸವಾಲಿಗೆ ಟೀಮ್ ಇಂಡಿಯಾ ಸಜ್ಜಾಗಬೇಕಿದೆ. 4 ದಿನಗಳ ನಂತರ ಭಾರತ ಮತ್ತು ಇಂಗ್ಲೆಂಡ್ ತಂಡಗಳು 5 ಟೆಸ್ಟ್ ಪಂದ್ಯಗಳ ಸುದೀರ್ಘ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಜನವರಿ 25 ರಿಂದ ಪ್ರಾರಂಭವಾಗುವ ಈ ಸರಣಿಗಾಗಿ, ಟೀಮ್ ಇಂಡಿಯಾ ಇಂದಿನಿಂದ ತರಬೇತಿ ಶುರುಮಾಡಲಿದೆ.
ಸರಣಿಯ ಮೊದಲ ಟೆಸ್ಟ್ ಪಂದ್ಯ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಇದಕ್ಕಾಗಿ ಜನವರಿ 20 ರ ಶನಿವಾರದಿಂದ ಭಾರತೀಯ ಆಟಗಾರರು ಹೈದರಾಬಾದ್ ತಲುಪಿದ್ದಾರೆ. ಜನವರಿ 17 ರಂದು ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ 20 ನಲ್ಲಿ ಜಯಗಳಿಸಿದ ನಂತರ, ಬಿಸಿಸಿಐ ಟೆಸ್ಟ್ ತಂಡದ ಆಟಗಾರರಿಗೆ 2 ದಿನಗಳ ವಿರಾಮವನ್ನು ನೀಡಿತ್ತು ಮತ್ತು ಜನವರಿ 20 ರಿಂದ ಹೈದರಾಬಾದ್ನಲ್ಲಿ ಸಭೆ ಸೇರುವಂತೆ ಆದೇಶಿಸಿತ್ತು. ಇಂದಿನಿಂದ ಟೀಮ್ ಇಂಡಿಯಾ ಹೈದರಾಬಾದ್ನಲ್ಲಿಯೇ 4 ದಿನಗಳ ತರಬೇತಿ ಶಿಬಿರವನ್ನು ಪ್ರಾರಂಭಿಸಲಿದೆ.
ಅಭ್ಯಾಸ ನಡುವೆ ಅಯೋಧ್ಯೆ ದರ್ಶನ
ಈ ತರಬೇತಿ ಶಿಬಿರದ ಎರಡನೇ ದಿನ ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ನಾಯಕ ರೋಹಿತ್ ಶರ್ಮಾ ಅಯೋಧ್ಯೆಗೆ ತೆರಳುವ ಸಾಧ್ಯತೆಯಿದೆ. ಅಲ್ಲಿ ಅವರು ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದಾದ ನಂತರ ಮತ್ತೆ ಸಿದ್ಧತೆಗಳು ಆರಂಭವಾಗಲಿವೆ. ಸುಮಾರು 2 ವಾರಗಳ ಹಿಂದೆಯಷ್ಟೇ ಭಾರತ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರೂ, ತಂಡದ ಆಟಗಾರರು ಕೆಂಪು ಚೆಂಡು ಕ್ರಿಕೆಟ್ನೊಂದಿಗೆ ದೂರವಾಗಿಲ್ಲ. ಆದರೆ, ಆ ಪಂದ್ಯವನ್ನು ರೋಹಿತ್ ಪಡೆ ವಿದೇಶದಲ್ಲಿ ಆಡಿದ್ದರೆ, ಇದು ತವರಿನಲ್ಲಿ ನಡೆಯುತ್ತಿರುವ ಪಂದ್ಯವಾಗಿದೆ.
ಹಿಂದೂಸ್ತಾನ್ ಸಮಾಚಾರ್
