
ಕೊಪ್ಪಳ, 29 ಡಿಸೆಂಬರ್(ಹಿ.ಸ):
ಆ್ಯಂಕರ್: 2023-24ನೇ ಸಾಲಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡೆಯನ್ನು ಉತ್ತೇಜಿಸುವ ಸಂಬಂಧ ಜಿಲ್ಲೆಯ ವಿವಿಧ ಕ್ರೀಡೆಯ ಕ್ರೀಡಾ ಪಟುಗಳು 2022ನೇ ಕ್ಯಾಲೆಂಡರ್ ವರ್ಷದಲ್ಲಿ (01.01.2022 ರಿಂದ 31.03.2023ರ) ಕ್ರೀಡಾ ಸಾಧನೆಯನ್ನು ಪರಿಗಣಿಸಿ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಪದಕ ಪಡೆದ ಜಿಲ್ಲೆಯ ಕ್ರೀಡಾ ಪಟುಗಳಿಗೆ ನೀಡುವ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಕೆ ಅವಧಿಯನ್ನು ಜನವರಿ 06 ರವರೆಗೆ ವಿಸ್ತರಿಸಲಾಗಿದೆ.
ಪ್ರೋತ್ಸಾಹ ಧನವನ್ನು ಕೊಪ್ಪಳ ಜಿಲ್ಲೆಯ ಕ್ರೀಡಾ ಪಟುಗಳಿಗೆ ಮಾತ್ರ ನೀಡಲಾಗುವುದು. ಕ್ರೀಡಾಪಟುಗಳು ಅಂತರಾಷ್ಟ್ರೀಯ/ರಾಷ್ಟ್ರೀಯ/ರಾಜ್ಯ ಮಟ್ಟದ ತಂಡಗಳನ್ನು ಪ್ರತಿನಿಧಿಸಿ ಸರ್ಕಾರದಿಂದ ಅಂಗೀಕೃತವಾದಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ವಿಜೇತರಾಗಿರಬೇಕು. ಕರ್ನಾಟಕದ ಮೂಲದವರಾಗಿದ್ದು, ಬೇರೆ ರಾಜ್ಯ ಅಥವಾ ಕ್ರೀಡಾತಂಡವನ್ನು ಪ್ರತಿನಿಧಿಸುವ ಕ್ರೀಡಾಪಟುಗಳು ಅರ್ಹರಾಗಿರುವುದಿಲ್ಲ. ಕ್ರೀಡಾಪಟುಗಳು 02 ಫೋಟೋ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರದ ಪ್ರತಿ ಸಲ್ಲಿಸಬೇಕು.
ಒಲಂಪಿಕ್/ಏಷ್ಯನ್/ಕಾಮನ್ ವೆಲ್ತ್ ಕ್ರೀಡೆಗಳಲ್ಲಿ ಅಂತರಾಷ್ಟ್ರೀಯ ಸಂಸ್ಥೆ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಮಂತ್ರಾಲಯದಿಂದ ಮಾನ್ಯತೆ ಪಡೆದ ಕ್ರೀಡಾ ಸಂಸ್ಥೆಗಳು ನಡೆಸುವ ಅಧಿಕೃತ ಚಾಂಪಿಯನ್ ಶಿಪ್ಗಳಿಗೆ ಮಾತ್ರ ಪ್ರೋತ್ಸಾಹಧನ ನೀಡಲಾಗುವುದು. (ಮಾನ್ಯತೆ ಪಡೆಯದೇ ಇರುವ ಯಾವುದೇ ಫೆಡರೇಷನ್ ನಡೆಸುವ ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಪ್ರೋತ್ಸಾಹಧನಕ್ಕೆ ಅರ್ಹರಾಗಿರುವುದಿಲ್ಲ). ಬ್ಯಾಂಕ್ ಖಾತೆ ಕಡ್ಡಾಯವಾಗಿ ಕ್ರೀಡಾಪಟುವಿನ ಹೆಸರಿನಲ್ಲಿರುವ ಬಗ್ಗೆ ಝರಾಕ್ಸ್ ಪ್ರತಿಯನ್ನು ಸಲ್ಲಿಸಬೇಕು ಎಂದು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
