
ಬೆಂಗಳೂರು, 18ಜನವರಿ(ಹಿ.ಸ):
ಆ್ಯಂಕರ್ :
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಮೂರನೇ ಹಾಗೂ ಅಂತಿಮ ಟಿ20 ಪಂದ್ಯವನ್ನು 10 ರನ್ಗಳಿಂದ ಗೆದ್ದುಕೊಳ್ಳುವ ಮೂಲಕ ಟೀಂ ಇಂಡಿಯಾ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಬಹಳ ರೋಚಕತೆಯಿಂದ ಕೂಡಿದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅಫ್ಘಾನಿಸ್ತಾನಕ್ಕೆ 213 ರನ್ ಟಾರ್ಗೆಟ್ ನೀಡಿತ್ತು. ಉತ್ತರವಾಗಿ ಅಫ್ಘಾನಿಸ್ತಾನ ತಂಡ ಕೂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಹೀಗಾಗಿ ಪಂದ್ಯ ಟೈ ಆಯಿತು. ಮೊದಲ ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 6 ಎಸೆತಗಳಲ್ಲಿ 16 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಭಾರತ ಕೂಡ 6 ಎಸೆತಗಳಲ್ಲಿ 16 ರನ್ ಕಲೆಹಾಕಿತು. ಹೀಗಾಗಿ ಪಂದ್ಯ ಎರಡನೇ ಬಾರಿಯೂ ಟೈ ಆಯಿತು. ಆದ್ದರಿಂದ ಪಂದ್ಯ ಮತ್ತೊಮ್ಮೆ ಸೂಪರ್ ಓವರ್ಗೆ ಸಾಗಿತು. ಈ ವೇಳೆ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಮೊದಲ ಐದು ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡು 11 ರನ್ ಕಲೆಹಾಕಿತು. ಈ ಮೂಲಕ ಅಫ್ಘಾನಿಸ್ತಾನಕ್ಕೆ 12 ರನ್ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನಟ್ಟಿದ ಅಫ್ಘಾನ್ ಮೊದಲ ಮೂರು ಎಸೆತಗಳಲ್ಲಿ 1 ರನ್ ಬಾರಿಸಿ ಎರಡು ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ ಭಾರತ 10 ರನ್ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
ರೋಹಿತ್- ರಿಂಕು 190 ರನ್ ಜೊತೆಯಾಟ
ಇದಕ್ಕೂ ಮುನ್ನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ಗಳಲ್ಲಿ 213 ರನ್ ಕಲೆಹಾಕಿತು. ತಂಡದ ಪರ ದಾಖಲೆಯ ಐದನೇ ಟಿ20 ಶತಕ ಸಿಡಿಸಿದ ನಾಯಕ ರೋಹಿತ್ ಶರ್ಮಾ ಅಜೇಯ 121 ರನ್ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದರೆ, ರಿಂಕು ಸಿಂಗ್ ಕೂಡ 39 ಎಸೆತಗಳಲ್ಲಿ 69 ರನ್ಗಳ ಅಜೇಯ ಕಾಣಿಕೆ ನೀಡಿದರು. ಅಲ್ಲದೆ ರೋಹಿತ್ ಮತ್ತು ರಿಂಕು ನಡುವೆ 190 ರನ್ಗಳ ದಾಖಲೆಯ ಜೊತೆಯಾಟ ಕೂಡ ನಡೆಯಿತು. ಹೀಗಾಗಿ ತಂಡ ಕೇವಲ 4 ವಿಕೆಟ್ ಕಳೆದುಕೊಂಡು ಅಫ್ಘಾನಿಸ್ತಾನಕ್ಕೆ 213 ರನ್ಗಳ ಬೃಹತ್ ಟಾರ್ಗೆಟ್ ನೀಡಿತು.
ಸೂಪರ್ ಓವರ್ನಲ್ಲಿ ಅಫ್ಘಾನ್ಗೆ ಸೋಲು
ಈ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡದ ಪರ ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ಗುಲ್ಬದಿನ್ ನೈಬ್ ಕ್ರಮವಾಗಿ 50, 50, 55 ರನ್ ಕಲೆಹಾಕಿದರೆ, ಆಲ್ರೌಂಡರ್ ಮೊಹಮ್ಮದ್ ನಬಿ 34 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಹೀಗಾಗಿ ತಂಡ ಭಾರತದ ಬೃಹತ್ ಟಾರ್ಗೆಟ್ ಅನ್ನು ಬೆನ್ನಟ್ಟಿ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಆದರೆ ಆ ಬಳಿಕ ನಡೆದ ಎರಡೆರಡು ಸೂಪರ್ ಓವರ್ ಪಂದ್ಯದಲ್ಲಿ ಸೋಲನುಭವಿಸುವ ಮೂಲಕ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮುಖಭಂಗವನ್ನು ಎದುರಿಸಿತು.
ಹಿಂದೂಸ್ತಾನ್ ಸಮಾಚಾರ್
