ಕಲಬುರಗಿ, 22 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಸಾರ್ವಜನಿಕ ಹಿತಾಸಕ್ತಿಯಡಿ ಕೋರುವ ಮಾಹಿತಿಯನ್ನು ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ಒದಗಿಸುವುದೇ ತಮ್ಮ ಪ್ರಥಮ ಆದ್ಯತೆಯಾಗಿರಲಿದೆ ಎಂದು ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ಮಾಹಿತಿ ಆಯುಕ್ತರಾದ ಬಿ ವೆಂಕಟಸಿ0ಗ್ ಅವರು ತಿಳಿಸಿದ್ದಾರೆ.
ಕಲಬುರಗಿ ನಗರದ ಕರ್ನಾಟಕ ಮಾಹಿತಿ ಆಯೋಗದ ಕಚೇರಿಯಲ್ಲಿ ಕಲಬುರಗಿ ಪೀಠದ ಮಾಹಿತಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಹಿತಿ ಅಧಿಕಾರಿಗಳಿಗೆ ದಂಡ ವಿಧಿಸುವ ಬದಲು ಸಾರ್ವಜನಿಕರಿಗೆ ಮಾಹಿತಿ ನೀಡುವ ಮೂಲಕ ನ್ಯಾಯ ಒದಗಿಸುವ ಕೆಲಸ ಪೀಠ ಮಾಡಲಿದೆ ಎಂದರು.
ಉತ್ತರದಾಯಿತ್ವದ ಹಿನ್ನೆಲೆಯಲ್ಲಿ 2005ರಲ್ಲಿ ಕೇಂದ್ರ ಸರ್ಕಾರ ಜಾರಿ ತಂದ ಮಾಹಿತಿ ಹಕ್ಕು ಕಾಯ್ದೆಯನ್ನು ಅದೇ ವರ್ಷ ರಾಜ್ಯದಲ್ಲಿ ಅನುಷ್ಠಾನ ಮಾಡುವ ಮೂಲಕ ಕಾಯ್ದೆ ಅನುಷ್ಠಾನಕ್ಕೆ ತಂದ ಮೊದಲ ರಾಜ್ಯ ಕರ್ನಾಟಕವಾಗಿದೆ. ಕಲಬುರಗಿ ಪೀಠದಲ್ಲಿ ಸುಮಾರು 7 ಸಾವಿರ ಅರ್ಜಿಗಳು ವಿಚಾರಣೆಗೆ ಬಾಕಿ ಇದ್ದು, ಇದನ್ನು ಹಂತ ಹಂತವಾಗಿ ವಿಲೇವಾರಿ ಮಾಡಲಾಗುವುದು ಎಂದರು.
ದೇಶದ ಬೇರೆ ರಾಜ್ಯಕ್ಕೆ ಹೋಲಿಸಿದಾಗ ಮಹಾರಾಷ್ಟ್ರದಲ್ಲಿ 60 ಸಾವಿರ, ತಮಿಳುನಾಡಿನಲ್ಲಿ 51 ಸಾವಿರ ಅರ್ಜಿ ವಿಚಾರಣೆಗೆ ಬಾಕಿ ಇದ್ದರೆ, ರಾಜ್ಯದ ಮಾಹಿತಿ ಹಕ್ಕು ಆಯೋಗದಲ್ಲಿ 38 ಸಾವಿರ ಅರ್ಜಿಗಳಿವೆ. ಇತ್ತೀಚೆಗೆ ರಾಜ್ಯದಲ್ಲಿ ಹೊಸ ಆಯುಕ್ತರ ನೇಮಕಾತಿ ಆಗಿರುವುದರಿಂದ ಇದೀಗ ಅರ್ಜಿಗಳ ವಿಲೇವಾರಿ ವೇಗ ಪಡೆಯಲಿದೆ. ಪಾರದರ್ಶಕವಾಗಿ ಮತ್ತು ನ್ಯಾಯಸಮ್ಮತವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಆಯೋಗ ಹೆಚ್ಚು ಕಾಯೋನ್ಮುಖವಾಗಿರಲಿದೆ ಎಂದರು.
ಕಳೆದ 2-3 ವರ್ಷಗಳಿಂದ ಕಲಬುರಗಿ ಪೀಠ ಶಾಶ್ವತವಾಗಿ ಕಲಬುರಗಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಪೀಠಕ್ಕೆ ಸ್ವಂತ ಕಟ್ಟಡ ಇಲ್ಲ. ಹೈಕೋರ್ಟ್ ಬಳಿ ಸಿ.ಎ. ಸೈಟ್ ಲಭ್ಯವಿರುವುದರಿಂದ ನಗರಾಭಿವೃದ್ಧಿ ಪ್ರಾಧಿಕಾರವನ್ನು ಸಂಪರ್ಕಿಸಿ ನಿವೇಶನ ಪಡೆದು ಸ್ವಂತ ಕಟ್ಟಡ ಹೊಂದಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಜಿಲ್ಲಾವಾರು ಕಾರ್ಯಾಗಾರ: ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಹಲವು ಅಧಿಕಾರಿಗಳು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಹೀಗಾಗಿ ಅನಗತ್ಯ ಅರ್ಜಿ ವಲೇವಾರಿ ಮಾಡದೆ ಹಾಗೆ ಇಟ್ಟುಕೊಂಡಿದ್ದರಿ0ದ ಮಲ್ಮನವಿಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಅರ್ಜಿ ಸಲ್ಲಿಸಿದ 30 ದಿನದೊಳಗೆ ಅರ್ಜಿದಾರನಿಗೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮಾಹಿತಿ ನೀಡದಿದ್ದಾಗ ಅರ್ಜಿದಾರ ಪ್ರಥಮ ಮೇಲ್ಮನವಿ ಪ್ರಾಧಿಕಾರದ ಮುಂದೆ ಹೋಗುತ್ತಾನೆ.
ಅಲ್ಲಿಯೂ ಅವರಿಗೆ ಸಮರ್ಪಕ ಉತ್ತರ ಸಿಗದಿದ್ದಾಗ ಆಯೋಗದ ಕದ ತಟ್ಟುತ್ತಾರೆ. ಹೀಗಾಗಿ ಕಲಬುರಗಿ ಪೀಠಕ್ಕೆ ಒಳಪಡುವ ಕಲಬುರಗಿ ವಿಭಾಗದ ಏಳು ಜಿಲ್ಲೆಗಳ ಅಧಿಕಾರಿಗಳಿಗೆ ಕಾಯ್ದೆ ಬಗ್ಗೆ ಸಮರ್ಪಕ ಮಾಹಿತಿ ನೀಡಲು ಜಿಲ್ಲಾ ಮಟ್ಟದಲ್ಲಿ ಮಾಹಿತಿ ಹಕ್ಕು ಕಾಯ್ದೆ ಕುರಿತು ಕಾರ್ಯಾಗಾರ ಆಯೋಜಿಸಲಾಗುವುದು ಎಂದು ಆಯುಕ್ತರಾದ ಬಿ ವೆಂಕಟ ಸಿಂಗ್ ಅವರು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್
