
ಬೆಂಗಳೂರು,15ನವೆಂಬರ್ (ಹಿ.ಸ):
ಆ್ಯಂಕರ್ :ಚಿಕ್ಕಬಳ್ಳಾಪುರ ಜಿಲ್ಲೆ ದಿಬ್ಬೂರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಸೊಳ್ಳೆಯಲ್ಲಿ ಝೀಕಾ ವೈರಸ್ ಪತ್ತೆಯಾಗಿ ಆತಂಕ ಸೃಷ್ಟಿಸಿದ್ದ ಪ್ರಕರಣ ಸಂಬಂಧ ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಯ 30 ಮಂದಿ ಸೋಂಕು ಲಕ್ಷಣಗಳುಳ್ಳ ವ್ಯಕ್ತಿಗಳ ಮಾದರಿಗಳ ಎನ್ಐವಿ (ರಾಷ್ಟ್ರೀಯ ವೈರಾಣು ಸಂಸ್ಥೆ) ಪರೀಕ್ಷಾ ವರದಿ ಬಂದಿದ್ದು, ಅಷ್ಟೂ ಮಂದಿಗೂ ಝೀಕಾ ಸೋಂಕು ಪರೀಕ್ಷೆ ಫಲಿತಾಂಶ ನೆಗೆಟಿವ್ ಇದೆ. ನೆಗೆಟಿವ್ ಫಲಿತಾಂಶ ಬಂದಿರುವುದರಿಂದ ಝೀಕಾ ಭೀತಿಯಲ್ಲಿದ್ದ ರಾಜ್ಯದ ಜನತೆ ನಿಟ್ಟಿಸಿರು ಬಿಡುವಂತಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಸೊಳ್ಳೆಯ ಮಾದರಿಗಳ ಸಂಗ್ರಹದ ವೇಳೆ ಈಡಿಸ್ ಸೊಳ್ಳೆಯಲ್ಲಿ ಝಿಕಾ ವೈರಸ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಝೀಕಾ ಲಕ್ಷಣಗಳಾದ ಜ್ವರದೊಂದಿಗೆ 2 ರಿಂದ 7 ದಿನಗಳವರೆಗೆ ಕಣ್ಣು ಕೆಂಪು, ತಲೆನೋವು, ಚರ್ಮದ ಮೇಲೆ ದದ್ದು, ಮೈಕೈ ಹಾಗೂ ಕೀಲು ನೋವು ಲಕ್ಷಣಗಳುಳ್ಳ ಪ್ರಕರಣಗಳಲ್ಲಿ ಸೀರಮ್ (ರಕ್ತ) ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನ ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್ಐವಿಗೆ) ಕಳುಹಿಸಲಾಗಿತ್ತು.
ಹಿಂದೂಸ್ತಾನ್ ಸಮಾಚಾರ್
