
ಚಿಕ್ಕಮಗಳೂರು,8 ಜನವರಿ(ಹಿ.ಸ):
ಆ್ಯಂಕರ್ :
ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ 7 ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದತ್ತಜಯಂತಿಯ ವೇಳೆ ನಡೆದಿದ್ದ ಘಟನೆಗಳು ಇದೀಗ ರಾಜಕೀಯ ಅಸ್ತ್ರಗಳಾಗಿವೆ. ಗೋರಿ ಧ್ವಂಸ ಮಾಡಿದ್ದ 14 ಹಿಂದೂ ಕಾರ್ಯಕರ್ತರ ಮೇಲಿನ ಕೇಸ್ಗೆ ಚಾರ್ಜ್ ಶೀಟ್ ಸಲ್ಲಿಸಲು ಸರ್ಕಾರ ಅನುಮತಿ ನೀಡಿ ಸಮನ್ಸ್ ಜಾರಿ ಮಾಡಿದೆ. ದತ್ತ ಪೀಠ ಹೋರಾಟಗಾರರ ಮೇಲೆ ಸಮನ್ಸ್ ಜಾರಿ ಹಿನ್ನಲೆ ಚಿಕ್ಕಮಗಳೂರು ಜೆಎಂ ಎಫ್ ಸಿ ನ್ಯಾಯಾಲಯಕ್ಕೆ 14 ಆರೋಪಿಗಳು ಇಂದು ಹಾಜರಾಗಲಿದ್ದಾರೆ.
ಸರ್ಕಾರದ ಅನುಮತಿ ಮೇರೆಗೆ 7 ವರ್ಷಗಳ ಬಳಿಕ ಪೊಲೀಸರು ಈ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ತುಡುಕೂರು ಮಂಜು, ಶಿವರಾಜ್, ಸಂದೇಶ್, ಸುಮಂತ್, ನಾಗ, ನಾಗೇಂದ್ರ ಪೂಜಾರಿ, ಮೋಹನ್, ಅಶೋಕ್, ತೇಜು, ಶ್ರೀನಾಥ್ ಮಹೇಂದ್ರ, ಸಂದೀಪ್, ರಾಮು ಸೇರಿದಂತೆ 14 ಆರೋಪಿಗಳು ಡಿ.8 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಚಿಕ್ಕಮಗಳೂರು ಜೆಎಂ ಎಫ್ ಸಿ ನ್ಯಾಯಾಲಯದಿಂದ ಸಮನ್ಸ್ ಜಾರಿ ಮಾಡಲಾಗಿದೆ. ಈ ಹಿನ್ನೆಲೆ ಚಿಕ್ಕಮಗಳೂರು ಜೆಎಂ ಎಫ್ ಸಿ ನ್ಯಾಯಾಲಯಕ್ಕೆ 14 ಆರೋಪಿಗಳು ಇಂದು ಹಾಜರಾಗಲಿದ್ದಾರೆ.
ಘಟನೆ ಹಿನ್ನೆಲೆ
ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದಲ್ಲಿರುವ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ 7 ವರ್ಷಗಳ ಹಿಂದೆ ಅಂದ್ರೆ 2017ರ ಡಿ.03ರಂದು ದತ್ತಜಯಂತಿ ವೇಳೆ ಗಲಾಟೆ ನಡೆಸಿ ಗೋರಿ ಧ್ವಂಸ ಮಾಡಲಾಗಿತ್ತು. ನಿಷೇಧಿತ ಪ್ರದೇಶಕ್ಕೆ ನುಗ್ಗಿದ್ದ ದತ್ತಮಾಲಾಧಾರಿಗಳ ಗುಂಪು ಭಗವದ್ವಜ ಹಾರಿಸಿ ಗೋರಿಗಳನ್ನ ಧ್ವಂಸ ಮಾಡಿತ್ತು. ಇದರಿಂದ ಉದ್ರಿಕ್ತರಾದ ಮತ್ತೊಂದು ಸಮುದಾಯದ ಗುಂಪು ಸಿಕ್ಕ ಸಿಕ್ಕ ಕಡೆ ಕಲ್ಲು ತೂರಾಟ ನಡೆಸಿತ್ತು. ಇದರಿಂದ ಚಿಕ್ಕಮಗಳೂರು ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯಾಗಿತ್ತು. ಸದ್ಯ ಈ ಘಟನೆ ಸಂಬಂಧ 14 ಆರೋಪಿಗಳ ಮೇಲೆ ಸಮನ್ಸ್ ಜಾರಿ ಮಾಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್
