




ಕೊಪ್ಪಳ, 26 ನವೆಂಬರ್ (ಹಿ.ಸ):
ಆ್ಯಂಕರ್ : ಕರ್ನಾಟಕ ಸಂಭ್ರಮ 50ರ ಜ್ಯೋತಿ ರಥಯಾತ್ರೆಯು ಪೂರ್ವ ನಿಗದಿಯಂತೆ ನವೆಂಬರ್ 26ರಂದು ಕೊಪ್ಪಳ ತಾಲೂಕಿಗೆ ಆಗಮಿಸಿದೆ
ಬೆಳಗ್ಗೆ ಗಂಗಾವತಿಯಿಂದ ಹೊರಟು ಬೂದಗುಂಪಾ ಮಾರ್ಗವಾಗಿ ಕೊಪ್ಪಳ ತಾಲೂಕಿಗೆ ಪ್ರವೇಶ ಮಾಡುವ ಸಂದರ್ಭದಲ್ಲಿ ಮಾರ್ಗ ಮಧ್ಯೆದ ಜಬ್ಬಲಗುಡ್ಡ ಗ್ರಾಮದಲ್ಲಿ ಬಳಿಯಲ್ಲಿ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು.
ಜಬ್ಬಲಗುಡ್ಡ ಸೇರಿದಂತೆ ಸುತ್ತಲಿನ ವಿವಿಧ ಗ್ರಾಮಗಳ ಮಹಿಳೆಯರು ರಥದ ಮುಂದೆ ಕುಂಭ ಹೊತ್ತು ಸಾಲಾಗಿ ಸಾಗಿ ಗಮನ ಸೆಳೆದರು. ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಮುಖಂಡರು ಕನ್ನಡ ಧ್ವಜದ ಶಾಲುಗಳನ್ನು ಹಾಕಿ ಸಾಲಾಗಿ ಹೆಜ್ಜೆ ಹಾಕಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ ವಿಠ್ಠಲ್ ಚೌಗಲಾ, ತಾಪಂ ಕಾರ್ಯನಿರ್ವಹಣಾಧಿಕಾರಿ ದುಂಡಪ್ಪ ತುರಾದಿ, ಗ್ರೇಡ್ 2 ತಹಸೀಲ್ದಾರ ಗವಿಸಿದ್ದಪ್ಪ ಮಣ್ಣೂರ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಲಕ್ಷ್ಮಿ, ಕೊಪ್ಪಳ ತಹಸೀಲ್ಧಾರ ಕಚೇರಿಯ ಶಿರಸ್ತೇದಾರ ಮಹಾವೀರಕುಮಾರ ಅಳ್ಳಳ್ಳಿ, ಬಿಸಿಎಂ ಇಲಾಖೆಯ ಅಧಿಕಾರಿ ನಾಗರತ್ನ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ವಿಲಾಸ ಸೇರಿದಂತೆ ಕೊಪ್ಪಳ ತಾಲೂಕಿನ ತಾಲೂಕುಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
ನವೆಂಬರ್ 28, 29ರಂದು ಕೂಕನೂರಲ್ಲಿ ಸಂಚಾರ: ಕೊಪ್ಪಳ ತಾಲೂಕಿನಲ್ಲಿ ಸಂಚರಿಸಿದ ಬಳಿಕ ಜ್ಯೋತಿ ರಥಯಾತ್ರೆಯು ಪೂರ್ವನಿಗದಿಯಂತೆ ನವೆಂಬರ್ 28 ಮತ್ತು ನವೆಂಬರ್ 29ರಂದು ಎರಡು ದಿನಗಳ ಕಾಲ ಕುಕನೂರ ತಾಲೂಕಿನಾದ್ಯಂತ ಸಂಚರಿಸಲಿದೆ.
ಜಿಲ್ಲಾಧಿಕಾರಿಗಳ ಸೂಚನೆ: ಕುಕನೂರ ತಾಲ್ಲೂಕಿನಲ್ಲಿ ಕನ್ನಡ ಜ್ಯೋತಿ ಯಾತ್ರೆ ರಥವು ಎರಡು ದಿನಗಳ ಕಾಲ ಇರುವುದರಿಂದ ಸಂಬಂಧಿಸಿದ ತಾಲ್ಲೂಕಿನ ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು ರಥಯಾತ್ರೆಯು ಸಂಚರಿಸುವ ಮಾರ್ಗವನ್ನು 2 ದಿನಕ್ಕೆ ನಿಗದಿಪಡಿಸಬೇಕು. ರಥವು ಸಂಚರಿಸುವ ಮಾರ್ಗದಲ್ಲಿ ಬರುವ ಪಟ್ಟಣ ಹಳ್ಳಿಗಳಲ್ಲಿ ಸ್ವಾಗತ, ಪೂಜೆ, ಪುಷ್ಪಾರ್ಚನೆ ಮೆರವಣಿಗೆ ಮಾಡಿಸಬೇಕು. ಅಧಿಕಾರಿಗಳು ಸಿಬ್ಬಂದಿಗಳು, ಸಾರ್ವಜನಿಕರು, ಪ್ರೌಢಶಾಲೆ ಕಾಲೇಜು ವಿದ್ಯಾರ್ಥಿಗಳಿಂದ ಅದ್ದೂರಿ ಸ್ವಾಗತ, ಪೂಜೆ, ಪುಷ್ಪಾರ್ಚನೆ ಮತ್ತು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿಸುವ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಕುಕನೂರ ತಾಲೂಕಿನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.
ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥವು ನಂತರ ಯಲಬುರ್ಗಾ ತಾಲೂಕು, ಕುಷ್ಟಗಿ ತಾಲೂಕು, ಕನಕಗಿರಿ ತಾಲೂಕು ಹಾಗೂ ಕಾರಟಗಿ ತಾಲೂಕುಗಳಲ್ಲಿ ಸಹ ಸಂಚರಿಸಲಿದ್ದು, ತಾಲೂಕುಮಟ್ಟದ ಅಧಿಕಾರಿಗಳು ಈಗಿನಿಂದಲೇ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಜ್ಯೋತಿ ರಥಯಾತ್ರೆಯು ತಾಲೂಕಿಗೆ ಆಗಮಿಸುವ ಮಾಹಿತಿಯನ್ನು ಆಯಾ ತಾಲ್ಲೂಕಿನ ಜನಪ್ರತಿನಿಧಿಗಳಿಗೆ ಮತ್ತು ಸಾಹಿತಿಗಳು ಕಲಾವಿದರು, ಕನ್ನಡಪರ ಸಂಘಟನೆಗಳು, ಮಾಧ್ಯಮದವರಿಗೆ ತಿಳಿಸಬೇಕು. ಕಾರ್ಯಕ್ರಮಕ್ಕೆ ಆಯಾ ತಾಲೂಕಿನಲ್ಲಿ ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಮನ್ವಯದಲ್ಲಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬೇಕು. ಆಯಾ ತಾಲ್ಲೂಕಿನ ಗಡಿ ಭಾಗದವರೆಗೆ ಮಾರ್ಗ ಮಧ್ಯೆದಲ್ಲಿ ಬರುವ ಎಲ್ಲಾ ಹೋಬಳಿ ಹಾಗೂ ಗ್ರಾ.ಪಂಗಳಲ್ಲಿ ಗೌರವಯುತವಾಗಿ ಬರಮಾಡಿಕೊಳ್ಳುವ ವ್ಯವಸ್ಥೆ ಮಾಡಬೇಕು. ಆಯಾ ತಾಲ್ಲೂಕಿನ ಗಡಿಭಾಗದ ಮುಕ್ತಾಯದವರೆಗೂ ಸಂಚರಿಸಿ ಮುಂದಿನ ತಾಲೂಕಿಗೆ ಬೀಳ್ಕೊಡುವ ಶಿಷ್ಠಾಚಾರ ಪಾಲನೆ ಮಾಡಬೇಕು ಎಂದು ಆಯಾ ತಾಲೂಕಿನ ತಹಶೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಪುರಸಭೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
