

ಕೊಪ್ಪಳ, 27 ನವೆಂಬರ್ (ಹಿ.ಸ):
ಆ್ಯಂಕರ್: ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳಿಗೆ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಸಮರ ಕಲೆ ಅಥವಾ ಆತ್ಮ ರಕ್ಷಣೆಯ ಕಲೆ ಅತ್ಯಗತ್ಯವಾಗಿದ್ದು, ಸರಕಾರ ಶಾಲೆ ಕಾಲೇಜುಗಳಲ್ಲಿ ಕರಾಟೆ ಕಲಿಕೆಗೆ ಒತ್ತುಕೊಡಬೇಕು ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಶಾಂತಿನಿಕೇತನ ಶಾಲೆಯ ಆವರಣದಲ್ಲಿ ಬ್ರೂಸ್ಲೀ ಕರಾಟೆ ತರಬೇತಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಬ್ರೂಸ್ಲೀ ಅವರ 83ನೇ ಜನ್ಮದಿನಾಚರಣೆ ಮತ್ತು ಅಂತರಾಷ್ಟ್ರೀಯ ಕರಾಟೆಯಲ್ಲಿ ಪ್ರಶಸ್ತಿ ಪಡೆದ ಮಕ್ಕಳಿಗೆ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದೇ ವೇಳೆ ಮಾತನಾಡಿದ ಅವರು, ಹೆಣ್ಣುಮಕ್ಕಳ ಸುರಕ್ಷತೆ ಹಾಗೂ ಶಿಸ್ತುಬದ್ಧ ಜೀವನಕ್ಕೆ ಕರಾಟೆ ಅಗತ್ಯವಾಗಿದೆ ಜೊತೆಗೆ ಸರಕಾರವೂ ಸಹ ಅದನ್ನು ತಮ್ಮ ಶಾಲಾ ವಾರ್ಷಿಕ ಕ್ರೀಡೆಯಲ್ಲಿ ಸೇರ್ಪಡೆ ಮಾಡಿಕೊಂಡಿರುವದರಿಂದ ಅದರ ಕಲಿಕೆ ಅಗತ್ಯವಾಗಿದ್ದು, ಅಧಿಕೃತವಾಗಿ ತರಬೇತಿ ಹೊಂದಿದ ಶಿಕ್ಷಕರನ್ನು ಅತಿಥಿ ಶಿಕ್ಷಕರಾಗಿ ನೇಮಿಸಿಕೊಂಡು ಮಕ್ಕಳಿಗೆ ನಿರಂತರವಾಗಿ ಕಲಿಸಬೇಕಿದೆ ಎಂದರಲ್ಲದೇ ಅಂಥಹ ಎಲ್ಲಾ ಕರಾಟೆ ಶಿಕ್ಷಕರ ನಿಯೋಗವನ್ನು ತೆಗೆದುಕೊಂಡು ಸರಕಾರದ ಬಳಿ ಹೋಗುವ ನೇತೃತ್ವವಹಿಸಿಕೊಳ್ಳಲು ಸಹ ಸಿದ್ಧ ಎಂದರು.
ನಿವೃತ್ತ ಪ್ರಾಂಶುಪಾಲ ಡಾ. ಮಹಾಂತೇಶ ಮಲ್ಲನಗೌಡರ ಅವರು ಮಾತನಾಡಿ, ಎಂಟರ್ ದಿ ಡ್ರ್ಯಾಗನ್ ಚಿತ್ರದ ಮೂಲಕ ಮುನ್ನೆಲೆಗೆ ಬಂದ ಬ್ರೂಸ್ಲೀ ಸಾಧನೆ ಅಸಾಧಾರಣ, ಅವರ ಸಮರ ಕಲೆಯ ಭಂಗಿಯೇ ಮಕ್ಕಳಿಗೆ ಸ್ಪೂರ್ತಿಯಾಗಿದ್ದು, ಮಕ್ಕಳು ನಿಯಮಿತವಾಗಿ ಕಲಿತು ಸಾಧನೆ ಮಾಡಬೇಕು ಎಂದರು.
ಕೊಪ್ಪಳ ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ, ಕರಾಟೆಯ ಹಳೆಯ ವಿದ್ಯಾರ್ಥಿಯೂ ಆಗಿದ್ದ ಮಂಜುನಾಥ ಜಿ. ಗೊಂಡಬಾಳ ಅವರು ಮಾತನಾಡಿ, ಕರಾಟೆ ಕಲಿಸುವ ಶಿಕ್ಷಕರ ಬದುಕಿಗೆ ಸರಕಾರ ನೆರವಾಗಬೇಕು, ಪೋಷಕರು ಮತ್ತು ಶಾಲೆಗಳು ಅವರನ್ನು ಸರಿಯಾಗಿ ಬಳಸಿಕೊಂಡು ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬೇಕು ಜೊತೆಗೆ ಅಂಥಹ ಶಿಕ್ಷಕರಿಗೆ ಸಾಧ್ಯವಾದಷ್ಟು ಒಳ್ಳೆಯ ಸಂಭಾವನೆ ಕೊಡಬೇಕು ಎಂದರು. ಸರಕಾರ ಕರಾಟೆ ಸಾಧಕರಿಗೆ ಗೌರವಧನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು. ಬ್ರೂಸ್ಲೀ ಬದುಕಿದ್ದು ಕೇವಲ 33 ವರ್ಷವಾದರೂ ಆತನ ಕೆಲಸ ಮತ್ತು ಸಾಧನೆ ಅಜರಾಮರ. ಚೈನಾದಿಂದ ಬಂದ ಬ್ರೂಸ್ಲೀಗೆ ಅಮೇರಿಕಾ ತನ್ನ ದೇಶದ ಪೌರತ್ವ ನೀಡುವಷ್ಟು ಎತ್ತರಕ್ಕೆ ಅವರು ಬೆಳೆದಿದ್ದು ಇತಿಹಾಸ ಹಾಗೂ ಬ್ರೂಸ್ಲೀ ಗೆ ಮತ್ತೊಬ್ಬ ಸರಿಸಮಾನ ವ್ಯಕ್ತಿ ಬರಲು ಸಾಧ್ಯವೇ ಆಗಲಿಲ್ಲ ಎಂದರು.
ಈ ಸಂದರ್ಭದಲ್ಲಿ ಈಚೆಗೆ ನಡೆದ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ನಲ್ಲಿ ಕಟಾ ಮತ್ತು ಕುಮಿತೆಯಲ್ಲಿ ಪ್ರಶಸ್ತಿ ಪಡೆದ ಅರವಿಂದ್, ಆರ್ಚಿಸ್, ದೈವಿಕ್, ತೇಜಸ್ವಿನಿ ಅವರಿಗೆ ಬಹುಮಾನ ನೀಡಿ ಅಭಿನಂದಿಸಲಾಯತು. ಕೇಕ್ ಕತ್ತರಿಸಿ ಬ್ರೂಸ್ಲೀ ಜನ್ಮ ದಿನ ಆಚರಿಸಿದರು. ಬ್ರೂಸ್ಲೀ ಕರಾಟೆ ಕೇಂದ್ರದ ಮುಖ್ಯಸ್ಥ ಮಹಾಂತೇಶ್ ಮಂಗಳೂರು ಸ್ವಾಗತಿಸಿದರು, ಜಿಲ್ಲೆಯ ಮುಖ್ಯ ಕರಾಟೆ ಶಿಕ್ಷಕ ಮೌನೇಶ್ ವಡ್ಡಟ್ಟಿ ಅವರು ನಿರೂಪಿಸಿದರು, ರಾಮು ಪೂಜಾರ ವಂದಿಸಿದರು.
