ಶಿವಮೊಗ್ಗ, 17 ಮಾರ್ಚ್ :ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ರಾಜಕೀಯದ ಕಂಪನ ಶುರುವಾಗಿದೆ. ಕಲಬುರಗಿಯಿಂದಲೇ ಕರ್ನಾಟಕದ ಮತಬೇಟೆಗೆ ಪ್ರಧಾನಿ ಮೋದಿ ಪಾಂಚಜನ್ಯ ಮೊಳಗಿಸಿದ್ದಾರೆ. ನಾಳೆ ಮತ್ತೆ ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಈ ನಡುವೆ ರಾಜ್ಯ ಬಿಜೆಪಿ ನಾಯಕರು ಟಾಸ್ಕ್ ವೊಂದಕ್ಕೆ ಪ್ಲಾನ್ ಮಾಡಿದ್ದಾರೆ. ಅದುವೇ ಈಶ್ವರಪ್ಪ ಬಂಡಾಯ ಶಮನ.
ಲೋಕಸಭೆ ಚುನಾವಣೆಗೆ ಪ್ರಧಾನಿ ಮೋದಿ ಖರ್ಗೆ ತವರಿನಿಂದಲೇ ಮತ್ತೊಮ್ಮೆ ಪ್ರಧಾನಿ ಗದ್ದುಗೆ ಏರಲು ಪಾಂಚಜನ್ಯ ಮೊಳಗಿಸಿದ್ದಾರೆ. ನಿನ್ನೆ ಕಲಬುರಗಿಯಲ್ಲಿ ಬೃಹತ್ ಸಮಾವೇಶ ಮಾಡಿದ್ದ ಮೋದಿ ನಾಳೆ ಮತ್ತೆ ಶಿವಮೊಗ್ಗಕ್ಕೆ ಮರು ಪ್ರವೇಶ ಕೊಡಲಿದ್ದಾರೆ. ಮೋದಿ ಆಗಮನ ಹಿನ್ನೆಲೆ ಶಿವಮೊಗ್ಗದ ಅಲ್ಲಮಪ್ರಭು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ವೇದಿಕೆ ಸಜ್ಜಾಗಿದೆ. ಮೋದಿ ಕಾರ್ಯಕ್ರಮದ ವೇದಿಕೆಯನ್ನು ಬಿಎಸ್ ವೈ ಪುತ್ರ ರಾಘವೇಂದ್ರ ಜೊತೆ ತೆರಳಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸಿದ್ಧತೆ ವೀಕ್ಷಿಸಿದ್ದಾರೆ.
ಮೋದಿ ಶಿವಮೊಗ್ಗಕ್ಕೆ ಆಗಮನಕ್ಕೂ ಮೊದಲೇ ಈಶ್ವರಪ್ಪ ಬಂಡಾಯ ಬಿಸಿ ತಣ್ಣಗಾಗಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಬಿಎಸ್ವೈ ಈಶ್ವರಪ್ಪನವರ ಪುತ್ರನಿಗೆ ಟಿಕೆಟ್ ತಪ್ಪಲು ನಾವ್ಯಾರು ಕಾರಣರಲ್ಲ. ಕೇಂದ್ರದ ಚುನಾವಣಾ ಸಮಿತಿಯ ನಿರ್ಧಾರದಂತೆ ಟಿಕೆಟ್ ಹಂಚಿಕೆಯಾಗಿದೆ. ಹೀಗಾಗಿ ಈಶ್ವರಪ್ಪನವರ ಮನವೊಲಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಲು ಪ್ರಯತ್ನ ನಡೆದಿದೆ ಅಂತ ಹೇಳಿದ್ದಾರೆ.
