ಬೆಂಗಳೂರು,
ಆ್ಯಂಕರ್ : ಪ್ರಧಾನಿ ನರೇಂದ್ರಮೋದಿ ಅವರು ದೇಶದ ಸಮರ್ಥ ನಾಯಕರಾಗಿದ್ದು, ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುತ್ತಾರೆ ಎಂಬ ನಂಬಿಕೆ ವಿಶ್ವಾಸವಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು.
ಸುದ್ದಿಗೋಷಿಯಲ್ಲಿ ಮಾತನಾಡಿದ ಅವರು, ಒಡೆದು ಹೋಗಿದ್ದ ಕಾವೇರಿ ನ್ಯಾಯಾಧಿಕರಣ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದರು.
ಬೆಂಗಳೂರಿನಲ್ಲಿ ಕುಡಿಯುವ ನೀರಿಲ್ಲದೆ ಜನರು ಕಣ್ಣೀರು ಹಾಕುತ್ತಿದ್ದಾರೆ. ಹೇಮಾವತಿ ಎಡ ಮತ್ತು ಬಲದಂಡೆ ನಾಲೆಗಳಿಗೆ ನೀರು ಕೊಡುವುದಿಲ್ಲ ಎಂದು ಹೇಳಿದ್ದೀರಿ. ಹೇಮಾವತಿ ಜಲಾಶಯದ ನೀರನ್ನು ಬಳಸಿ ಬೆಂಗಳೂರು, ತುಮಕೂರು, ಹಾಸನ, ಮಂಡ್ಯ ಜಿಲ್ಲೆಗಳಿಗೆ ನೀರು ಕೊಟ್ಟು ಜನರನ್ನು ಉಳಿಸಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ತಮಿಳುನಾಡಿಗೆ ಮಾಸಿಕ ಎರಡೂವರೆ ಟಿಎಂಸಿ ಅಡಿಯಂತೆ ಮೇ ಅಂತ್ಯದವರೆಗೆ 10 ಟಿಎಂಸಿ ನೀರು ಬಿಡಬೇಕಾಗಿದೆ. ಆದರೆ ಬೆಂಗಳೂರಿನ ಜನತೆ ನೀರಿಲ್ಲದೆ ಕಣ್ಣೀರು ಹಾಕುತ್ತಿದ್ದಾರೆ. ನಾನು ಸಂಸತ್ನಲ್ಲಿ ಕುಡಿಯುವ ನೀರಿನ ವಿಚಾರ ಪ್ರಸ್ತಾಪಿಸಿದಾಗ ಮನಮೋಹನ್ ಸಿಂಗ್ ಸರ್ಕಾರದಲ್ಲಿದ್ದ ರಾಜ್ಯ ಪ್ರತಿನಿಧಿಸುವ ನಾಲ್ವರು ಸಚಿವರು ಸಹಾಯಕ್ಕೆ ಬರಲಿಲ್ಲ ಎಂದರು.
ಜಲಸಂಪನ್ಮೂಲ ಖಾತೆಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೊಂದಿದ್ದಾರೆ. ಆದರೆ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಟ್ಯಾಂಕರ್ಗೆ ಎರಡೂವರೆ ಸಾವಿರ ರೂ. ನೀಡಬೇಕಾದ ಪರಿಸ್ಥಿತಿ ಎದುರಾಗಿದೆ. ಬೆಳಗ್ಗೆಯಿಂದ ಸಂಜೆಯವರೆಗೂ ಮೋದಿ ವಿರುದ್ದ ಆರೋಪ ಮಾಡುತ್ತಾ, ಟೀಕೆ ಮಾಡುತ್ತಾ ಕಾಲ ಕಳೆಯುತ್ತೀರಿ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಹಣಕಾಸು ಆಯೋಗದ ತೀರ್ಮಾನ ಮಾಡಿದ್ದು ಬಿಟ್ಟರೆ ಏನು ಕೊಟ್ಟಿದ್ದಾರೆ ಹೇಳಿ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿ ಏನು ಕೊಟ್ಟಿದ್ದಾರೆ ಹೇಳಿ, ಪ್ರಧಾನಿ ಮೋದಿಯವರು ರಾಷ್ಟ್ರದ ಸಮರ್ಥ ನಾಯಕ. ಇಡೀ ವಿಶ್ವ ಒಪ್ಪಿಕೊಂಡಿದೆ. ಅವರ ಬಗ್ಗೆ ಮಾತನಾಡಲು ಇವರು ಯಾರು? ಇತಿಮಿತಿ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗಾಳಿ ನಡೆಸಿದರು.
ಜೆಡಿಎಸ್ ಬಗ್ಗೆ ಮುಖ್ಯಮಂತ್ರಿ ನೀಡಿದ್ದ ಹೇಳಿಕೆಗಳು ಪತ್ರಿಕೆಗಳಲ್ಲಿ ವರದಿಯಾಗಿರುವುದನ್ನು ಉಲ್ಲೇಖಿಸಿ ಮಾತನಾಡಿದ ಗೌಡರು, ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎಷ್ಟು ದಿನದಿಂದ ಇದೆ, ಎಷ್ಟು ಬಗೆಹರಿಸಿದ್ದೀರಿ, 10 ತಿಂಗಳಲ್ಲಿ ಎಷ್ಟು ಪ್ರವಾಸ ಮಾಡಿದ್ದೀರಿ, ವಿಧಾನಮಂಡಲದ ಅಧಿವೇಶನ ಹೊರತುಪಡಿಸಿದರೆ ಈ ಮಂತ್ರಿ, ಆ ಮಂತ್ರಿ ಮನೆಯಲ್ಲಿ ಊಟ, ಪಕ್ಷದ ಜಂಟಿ ಸಭೆ ಹೊರತು ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದರು.
