ನವದೆಹಲಿ, :
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 400ರ ಗುರಿಯತ್ತ ಬಾಣ ಬಿಟ್ಟಿರುವ ಬಿಜೆಪಿ , ಈಗಾಗಲೇ 195 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಬುಧವಾರ ಸಂಜೆಯಿಂದ ತಡರಾತ್ರಿವರೆಗೂ ಎರಡನೇ ಪಟ್ಟಿಗೆ ಸುದೀರ್ಘ ಸಭೆ ನಡೆಸಿದೆ. ಇದೇ ಸಭೆಯಲ್ಲಿ ಕರ್ನಾಟಕದ 28 ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮ ಮಾಡೋ ಕುರಿತು ಚರ್ಚೆ ಆಗಿದೆ.
5 ಕ್ಷೇತ್ರಗಳ ಅಭ್ಯರ್ಥಿಗಳಿಗೆ ಕೊಕ್
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಅಧಿಕ ಸ್ಥಾನವನ್ನು ಗುರಿಹೊಂದಿರುವ ಬಿಜೆಪಿ, ಅದನ್ನ ಸಾಧಿಸಲು ಸದ್ಯ ದಕ್ಷಿಣ ರಾಜ್ಯಗಳ ಮೇಲೆ ಕಣ್ಣಿಟ್ಟಿದೆ. ಅದ್ರಲ್ಲೂ ಕರ್ನಾಟಕದಲ್ಲಿ 25 ಬಿಜೆಪಿ ಸಂಸದರಿದ್ದು ಅದನ್ನ ಹಾಗೇ ಉಳಿಸಿಕೊಳ್ಳೋಕೆ, ಅಥವಾ ಅದಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ ಗುರಿ ರೂಪಿಸಿದೆ. ಹೀಗಾಗಿ, ರಾಜ್ಯದ ಪ್ರಮುಖ ನಾಯಕರನ್ನ ದೆಹಲಿಗೆ ಕರೆಸಿಕೊಂಡು ಬುಧವಾರ ಮ್ಯಾರಾಥಾನ್ ಸಭೆ ನಡೆಸಿದೆ. ಸಭೆಯಲ್ಲಿ ರಾಜ್ಯ ನಾಯಕರಾದ ಯಡಿಯೂರಪ್ಪ, ಬಿ.ಎಲ್ ಸಂತೋಷ್, ಬಿ.ವೈ ವಿಜಯೇಂದ್ರ, ಆರ್.ಅಶೋಕ್, ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಸೇರಿ ಅನೇಕ ನಾಯಕರು ಭಾಗಿಯಾಗಿದ್ದಾರೆ.
ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಬದಲಾಯಿಸುವ ಬಗ್ಗೆ ಚರ್ಚೆ
ದೆಹಲಿಯಲ್ಲಿ ನಡೆದ ಸಭೆಯಲ್ಲಿ ಕೆಲ ಕ್ಷೇತ್ರಗಳ ಅಭ್ಯರ್ಥಿಗಳನ್ನ ಬದಲಾಯಿಸುವ ಬಗ್ಗೆ ಚರ್ಚೆ ನಡೆದಿದೆ. ಈ ಮೊದಲು 11 ಕ್ಷೇತ್ರದಲ್ಲಿ ಬದಲಾವಣೆ ಮಾಡ್ತಾರೆ ಎನ್ನಲಾಗಿತ್ತು. ಆದರೆ, 5 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನ ಬದಲಿಸುವ ಬಗ್ಗೆ ನಿನ್ನೆ ಚರ್ಚೆ ನಡೆದಿದೆ. ಬೀದರ್ ಸಂಸದ ಭಗವಂತ ಖೂಬಾ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್, ವಿಜಯಪುರ ಸಂಸದ ರಮೇಶ್ ಜಿಗಜಿಣಗಿ, ಬೆಳಗಾವಿ ಸಂಸದೆ ಮಂಗಳಾ ಅಂಗಡಿ, ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿವಿಎಸ್ ಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ.
