ಕೋಲಾರ, ಮಾರ್ಚ್ :
ಆ್ಯಂಕರ್ : ಮೂರು ಪ್ರತ್ಯೇಕ ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಮಾಜಿ ನಗರಸಭಾ ಅಧ್ಯಕ್ಷ ಬಿ.ಎಂ.ಮುಭಾರಕ್ಗೆ ಕೋಲಾರದ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಧೀಶರಾದ ಚೇತನಾ ಅರಿಕಟ್ಟಿ ಅವರು ದಂಡ ಮತ್ತು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಕಳೆದ ೨೦೧೮ರಲ್ಲಿ ಬಿ.ಎಂ.ಮುಭಾರಕ್ ವಿರುದ್ಧ ದಾಖಲಾಗಿದ್ದ ಮೂರು ಪ್ರತ್ಯೇಕ ಚೆಕ್ ಬೌನ್ಸ್ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಧೀಶರು ಧೀರ್ಘವಾದ ಪ್ರತ್ಯೇಕ ಆದೇಶಗಳನ್ನು ಹೊರಡಿಸಿದ್ದಾರೆ.
ಮುಭಾರಕ್ ವಿರುದ್ಧ ನ್ಯಾಯಾಲಯದಲ್ಲಿ ಉದ್ಯಮಿ ಎನ್.ಗೋಪಾಲಕೃಷ್ಣ ನೆಗೋಶಿಯಬಲ್ ಇನ್ಸುಮೆಂಟ್ ಆಕ್ಟ್ ಸೆಕ್ಷನ್ ೧೩೮ ರ ಮೇರೆಗೆ ದಾಖಲಿಸಲಾಗಿದ್ದ ದೂರುಗಳ ವಿಚಾರಣೆ ನಡೆಸಿದ ನ್ಯಾಯಾಧೀಶರು ಮುಭಾರಕ್ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಕೋಟಿ ರೂ. ದಂಡ ಪಾವತಿ ಮಾಡಬೇಕು. ತಪ್ಪಿದಲ್ಲಿ ಆರು ತಿಂಗಳ ಶಿಕ್ಷೆ ಅನುಭವಿಸುವಂತೆ ಆದೇಶ ಹೊರಡಿಸಿದ್ದಾರೆ. ಪ್ರಕರಣದ ತೀರ್ಪು ಪ್ರಕಟಿಸಿದಾಗ ಆರೋಪಿ ಮುಭಾರಕ್ ನ್ಯಾಯಾಲಯದ ಮುಂದೆ ಹಾಜರಾಗದೆ ತಲೆ ಮರಿಸಿಕೊಂಡಿದ್ದರು. ಆರೋಪಿಗೆ ನೀಡಲಾಗಿದ್ದ ಜಾಮೀನನ್ನು ನ್ಯಾಯಾಲಯ ರದ್ದುಪಡಿಸಿದೆ.
ರಾಯಲ್ ಟ್ರೇರ್ಸ್ ಹೆಸರಿನಲ್ಲಿ ಕೋಲಾರದ ಕೊಂಡರಾಜನಹಳ್ಳಿ ದರ್ಗಾದ ಬಳಿ ವ್ಯಾಪರ ವಹಿವಾಟು ಮತ್ತು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ತಿಪ್ಪಸಂದ್ರ ಹೋಬಳಿ ತಾವರೆಕೆರೆಯಲ್ಲಿ ಎಂ.ಎಸ್.ಪೌಲ್ಟ್ರಿ ಬ್ರೀರ್ಸ್ ಕೋಳಿ ಸಾಕಾಣಿಕೆ ಉದ್ಯಮ ನಡೆಸುತ್ತಿರುವ ಮುಭಾರಕ್, ಗೋಪಾಲಕೃಷ್ಣ ಅವರಿಂದ ಕಳೆದ ನವೆಂಬರ್ ೧೫, ೨೦೧೭ ರಲ್ಲಿ ೫೦ ಲಕ್ಷ ರೂ. ಸಾಲ ಪಡೆದಿದ್ದರು. ಐವತ್ತು ಲಕ್ಷ ರೂ. ಅಲ್ಲದೆ ಬೇರೆ ಬೇರೆ ದಿನಾಂಕಗಳಲ್ಲಿ ಮುಭಾರಕ್ ಗೋಪಾಲಕೃಷ್ಣ ಅವರಿಂದ ಒಟ್ಟು ಎರಡು ಕೋಟಿ ರೂ. ಸಾಲ ಪಡೆದಿದ್ದರು.
ಪೌಲ್ಟ್ರಿ ಬ್ರೀಡಿಂಗ್ ಉದ್ಯಮ ನಡೆಸುತ್ತಿರುವ ಮುಭಾರಕ್, ಗೋಪಾಲಕೃಷ್ಣ ಅವರನ್ನು ಭೇಟಿ ಆಗಿ ಇದೊಂದು ಲಾಭದಾಯಕ ಉದ್ಯಮ ಆಗಿದೆ. ನೀವು ಸಹ ಪೌಲ್ಟ್ರಿ ಬ್ರೀಡಿಂಗ್ ಉದ್ಯಮ ಆರಂಭಿಸಿ ಎಂದು ಉತ್ತೇಜಿಸಿದ್ದರು.
ಮುಭಾರಕ್ ಗೋಪಾಲಕೃಷ್ಣ ಅವರಿಂದ ಪಡೆದಿದ್ದ ಸಾಲ ಮರುಪಾವತಿಗೆ ಮೂರು ಪ್ರತ್ಯೇಕ ಚೆಕ್ಗಳನ್ನು ನೀಡಿದ್ದರು. ಆ ಚೆಕ್ಗಳನ್ನು ನಗದೀಕರಣ ಮಾಡಲು ಬ್ಯಾಂಕ್ಗೆ ಹಾಜರುಪಡಿಸಿದಾಗ ಬೌನ್ಸ್ ಆಗಿದ್ದವು. ಇದರಿಂದಾಗಿ ಗೋಪಾಲಕೃಷ್ಣ ಅವರು ವಕೀಲರ ಮೂಲಕ ಮುಭಾರಕ್ಗೆ ಸಾಲ ಮರುಪಾವತಿ ಮಾಡಲು ನೋಟೀಸ್ ಜಾರಿ ಮಾಡಿದ್ದರು. ಆದರೆ ಮುಭಾರಕ್ ಆ ವಿಳಾಸದಲ್ಲಿ ಲಭ್ಯವಿಲ್ಲ ಎಂದು ನೋಟೀಸ್ ವಾಪಸ್ ಬಂದಿತ್ತು.
ಇದರಿಂದ ಬಾಧಿತರಾದ ಗೋಪಾಲಕೃಷ್ಣ ಕೋಲಾರದ ಹೆಚ್ಚುವರಿ ಒಂದನೇ ಜೆಎಂಎಫ್ಸಿ ನ್ಯಾಯಾಲಯದ ಮುಂದೆ ನೆಗೋಷಬಲ್ ಇನ್ಸ್ಟುಮೆಂಟ್ ಆಕ್ಟ್ ಸೆಕ್ಷನ್ ೧೩೮ರ ಪ್ರಕಾರ ದೂರು ದಾಖಲಿಸಿದ್ದರು. ದೂರು ದಾಖಲಿಸಿದ ನಂತರ ಆರೋಪಿ ಮುಭಾರಕ್ ಹಲವಾರು ಭಾರಿ ನ್ಯಾಯಾಲಯದ ಮುಂದೆ ಹಾಜರಾಗದೆ ತಲೆ ಮರಿಸಿಕೊಂಡಿದ್ದರು. ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಬಂಧನಕ್ಕೆ ನ್ಯಾಯಾಲಯ ವಾರಂಟ್ ಮಾಡಿ ಜಾರಿ ಮಾಡಿತ್ತು.
ನಾನು ಗೋಪಾಲಕೃಷ್ಣ ಅವರಿಂದ ಸಾಲ ಪಡೆದಿಲ್ಲ. ನಾವಿಬ್ಬರು ಒಂದೇ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೇವೆ. ನಗರಸಭೆಯ ಚುನಾವಣೆಗೆ ಸ್ಪರ್ಧಿಸಿದಾಗ ಚುನಾವಣಾ ವೆಚ್ಚಗಳಿಗೆ ಹಣ ಡ್ರಾ ಮಾಡಲು ಗೋಪಾಲಕೃಷ್ಣ ಅವರಿಗೆ ಖಾಲಿ ಚೆಕ್ಗಳನ್ನು ನೀಡಿದ್ದೆ. ಆದರೆ ಗೋಪಾಲಕೃಷ್ಣ ಆ ಚೆಕ್ಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ನಾನು ಅವರಿಂದ ಯಾವುದೇ ಸಾಲ ಪಡೆದಿಲ್ಲ ಎಂದು ಮೊದಲ ಬಾರಿಗೆ ಆರೋಪಿ ಮುಭಾರಕ್ ಆಕ್ಷೇಪ ವ್ಯಕ್ತಪಡಿಸಿದ್ದರು. ಮುಭಾರಕ್ ರವರ ಈ ಆಕ್ಷೇಪವನ್ನು ನ್ಯಾಯಾಲಯ ತಳ್ಳಿ ಹಾಕಿದೆ.
ಆರೋಪಿ ಚೆಕ್ಕುಗಳ ಮೇಲೆ ಇರುವ ಬದಲಾವಣೆಗಳನ್ನು ದೃಢೀಕರಿಸಿದ್ದಾರೆ. ಬ್ಯಾಂಕ್ ಸಹ ಆರೋಪಿಯ ಸಹಿ ಇಲ್ಲ ಎಂದು ಹೇಳಿಲ್ಲ. ಇದರಿಂದಾಗಿ ಆರೋಪಿಯ ಸಹಿ ಫೋರ್ಜರಿ ಮಾಡಲಾಗಿದೆ ಎಂಬ ಆರೋಪಿ ಪರ ವಕೀಲರ ವಾದವನ್ನು ಒಪ್ಪಲಾಗದು ಎಂದು ನ್ಯಾಯಾಲಯ ಆಕ್ಷೇಪಣೆಯನ್ನು ತಳ್ಳಿ ಹಾಕಿದೆ.
ದೂರುದಾರರು ಆರೋಪಿ ಪರ ನೆಗೋಷಿಯಬಲ್ ಇಸ್ಟೂçಮೆಂಟ್ ಆಕ್ಟ್ ದಾಖಲಿಸಿರುವ ದೂರಿನ ಪ್ರಕಾರ ಕಾನೂನುಬದ್ಧವಾಗಿ ಸಾಲ ವಸೂಲಾತಿಗೆ ಸಾಧ್ಯವಿಲ್ಲ ಎಂದು ಆರೋಪಿ ಪರ ವಕೀಲರು ವಾದ ಮಂಡಿಸಿದರು.
ಗೋಪಾಲಕೃಷ್ಣ ಅವರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕೋಲಾರ ಶಾಖೆಯ ಮಲ್ಟಿಸಿಟಿ ಚೆಕ್ಗಳನ್ನು ನೀಡಿದ್ದಾರೆ. ಈ ಚೆಕ್ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಯಾವುದೇ ಶಾಖೆಯಲ್ಲಿ ಹಾಜರುಪಡಿಸಿ ಹಣ ಪಡೆಯಬಹುದಾಗಿದೆ. ಆದರೆ ಹತ್ತು ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಚೆಕ್ಗಳನ್ನು ಮಲ್ಟಿಸಿಟಿ ಶಾಖೆಗಳಲ್ಲಿ ಹಾಜರುಪಡಿಸಿ ನಗದೀಕರಣ ಮಾಡಲು ಬ್ಯಾಂಕಿ0ಗ್ ನಿಯಮಗಳಲ್ಲಿ ಅವಕಾಶವಿಲ್ಲ ಎಂದು ನ್ಯಾಯಾಲಯದ ಮುಂದೆ ಆರೋಪಿ ವಾದ ಮಾಡಿದ್ದರು.
ಆರ್.ಬಿ.ಐ ಕೋರ್ ಬ್ಯಾಂಕಿ0ಗ್ ಸಿಸ್ಟಮ್ ಮೂಲಕ ಎಲ್ಲಾ ವಾಣಿಜ್ಯ ಬ್ಯಾಂಕುಗಳು ಚೆಕ್ಕುಗಳನ್ನು ಹಾಜರುಪಡಿಸಿ ನಗದೀಕರಣ ಮಾಡಲು ಕಡ್ಡಾಯ ಮಾಡಿದೆ. ಇದರಿಂದಾಗಿ ದೂರುದಾರರು ಚೆಕ್ಕುಗಳನ್ನು ಬ್ಯಾಂಕಿಗೆ ಹಾಜರುಪಡಿಸಿದಾಗ ಯವುದೇ ದೋಷ ಮಾಡಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಗೋಪಾಲಕೃಷ್ಣ ಅವರು ನ್ಯಾಯಾಲಯದ ಮುಂದೆ ತಮ್ಮ ಆದಾಯದ ಮೂಲಗಳನ್ನು ಮತ್ತು ಆದಾಯ ತೆರಿಗೆ ಪಾವತಿ ರಿಟನ್ಸ್ಗಳನ್ನು ಹಾಜರುಪಡಿಸಿಲ್ಲ. ಎರಡು ಕೋಟಿ ರೂ. ಸಾಲ ನೀಡಲು ಅವರಿಗೆ ಸಾಮರ್ಥ್ಯವಿಲ್ಲ. ಆರೋಪಿಗೆ ಕಿರುಕುಳ ನೀಡುವ ಉದ್ದೇಶದಿಂದ ಮುಭಾರಕ್ ನೀಡಲಾಗಿದ್ದ ಖಾಲಿ ಚೆಕ್ಗಳಲ್ಲಿ ಹೆಸರನ್ನು ಬರೆದು ಸಹಿಯನ್ನು ಫೋರ್ಜರಿ ಮಾಡಿ ಸುಳ್ಳು ದೂರು ನೀಡಲಾಗಿದೆ ಎಂದು ಆರೋಪಿ ಪರ ವಕೀಲರು ವಾದ ಮಂಡಿಸಿದ್ದರು.
ದೂರುದಾರರಿಗೆ ಸಾಲ ನೀಡುವ ಸಾಮರ್ಥ್ಯವನ್ನು ಸಾಲ ನೀಡಿದ ಸಂದರ್ಭವನ್ನು ಸಾಲ ಮರುಪಾವತಿಗೆ ಒತ್ತಾಯಿಸುವ ಸಂದರ್ಭವನ್ನು ನೋಡಬೇಕಾಗಿದೆ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಆಂಧ್ರಪ್ರದೇಶ ಹೈಕೋರ್ಟ್ ತೇಜ ಬೆನಿಫಿಟ್ ಫಂಡ್ ಪ್ರಕಾರಣದ ತೀರ್ಪನ್ನು ಉಲ್ಲೇಖಿಸಿರುವ ನ್ಯಾಯಾಧೀಶರು ನೆಗೋಷಿಯಬಲ್ ಇನ್ಟೂçಮೆಂಟ್ ಆಕ್ಟ್ ಪ್ರಕಾರ ಸಾಲ ಮರುಪಾವತಿಸುವ ಪ್ರಕರಣ ಅಲ್ಲ ಎಂಬುದನ್ನು ಆರೋಪಿ ಸಾಬೀತುಪಡಿಸಬೇಕು. ಸಾಬೀತುಪಡಿಸುವುದು ಆರೋಪಿಯ ಹೊರೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯದಕ್ಕೆ ಈ ಪ್ರಕರಣದ ವಿಚಾರಣೆ ನಡೆಸಲು ಅಧಿಕಾರವಿಲ್ಲ. ಜೆಎಂಎಫ್ಸಿ ನ್ಯಾಯಾಲಯ ಸಮನ್ಸ್ ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಬಹುದಾಗಿದೆ. ಈ ಪ್ರಕರಣ ವಾರಂಟ್ ಪ್ರಕರಣವಾಗಿದ್ದು, ದೂರನ್ನು ರದ್ದುಪಡಿಸುವಂತೆ ಆರೋಪಿ ಪರ ವಕೀಲರು ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಆದರೆ ನ್ಯಾಯಾಲಯ ಆರೋಪಿ ಎಲ್ಲಾ ಹಂತಗಳಲ್ಲಿ ವ್ಯಕ್ತಪಡಿಸಿದ್ದ ಆಕ್ಷೇಪಣೆಗಳನ್ನು ತಳ್ಳಿಹಾಕಿದೆ.
ಆರೋಪಿ ತಾನು ಪಡೆದಿದ್ದ ಸಾಲ ತೀರಿಸಲು ಚೆಕ್ಗಳನ್ನು ನೀಡಿದ್ದಾನೆ. ದೂರುದಾರರಿಗೆ ನೀಡಿದ್ದ ಚೆಕ್ಗಳು ಬ್ಯಾಂಕ್ಗೆ ಹಾಜರುಪಡಿಸಿದಾಗ ಹಣದ ಕೊರತೆಯಿಂದ ಬೌನ್ಸ್ ಆಗಿವೆ. ಆರೋಪಿಯನ್ನು ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಆಕ್ಟ್ ಪ್ರಕಾರ ದೋಷಿ ಎಂದು ನಿರ್ಧರಿಸಲು ನ್ಯಾಯಾಲಯದ ಮುಂದೆ ಸಾಕಷ್ಟು ಸಾಕ್ಷ್ಯಾಧಾರಗಳನ್ನು ದೂರುದಾರರು ಒದಗಿಸಿದ್ದಾರೆ ಎಂದು ನ್ಯಾಯಮೂರ್ತಿ ಶ್ರೀಮತಿ ಚೇತನಾ ಅರಳಿಕಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತೀರ್ಪನ್ನು ಸಮರ್ಥಿಸಲು ದೇಶದ ವಿವಿಧ ಹೈಕೋರ್ಟ್ ಮತ್ತು ಬೇರೆ ಬೇರೆ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿದ್ದಾರೆ. ಆರೋಪಿಗೆ ವಿಧಿಸಲಾಗಿರುವ ದಂಡದ ೫೨ ಲಕ್ಷ ರೂ. ಮೊತ್ತದ ಪೈಕಿ ದೂರುದಾರರಿಗೆ ೫೧ ಲಕ್ಷ ೯೦ ಸಾವಿರ ರೂ. ಪರಿಹಾರ ಪಾವತಿ ಮಾಡಬೇಕು. ಅಲ್ಲದೆ. ೧೦ ಸಾವಿರ ರೂ. ಪ್ರಾಸಿಕ್ಯೂಷನ್ ವೆಚ್ಚವನ್ನು ಪಾವತಿ ಮಾಡಬೇಕೆಂದು ಆದೇಶಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಆರೋಪಿ ೧ ಕೋಟಿ ರೂ. ದಂಡ ಪಾವತಿ ಮಾಡಬೇಕು. ಆ ಪೈಕಿ ೯೯ ಲಕ್ಷದ ೯೦ ಸಾವಿರ ರೂ. ಪರಿಹಾರವನ್ನು ದೂರುದಾರರಿಗೆ ಮತ್ತು ಪ್ರಾಸಿಕ್ಯೂಷನ್ ವೆಚ್ಚ ೧೦ ಸಾವಿರ ರೂ. ಪಾವತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ಮತ್ತೊಂದು ಪ್ರಕರಣದಲ್ಲಿ ಆರೋಪಿಗೆ ೫೨ ಲಕ್ಷ ರೂ. ದಂಡ ವಿಧಿಸಲಾಗಿದ್ದು, ಆ ಪೈಕಿ ೫೧ ಲಕ್ಷದ ೯೦ ಸಾವಿರ ದೂರು ದಾರರಿಗೆ ಪರಿಹಾರ ಮತ್ತು ನ್ಯಾಯಾಲಯಕ್ಕೆ ೧೦ ಸಾವಿರ ರೂ. ಪ್ರಾಸಿಕ್ಯೂಷನ್ ವೆಚ್ಚ ಪಾವತಿ ಮಾಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ದೂರುದಾರರನ್ನು ವಕೀಲ ಹನುಮಂತು ನ್ಯಾಯಾಲಯದ ಮುಂದೆ ಪ್ರತಿನಿಧಿಸಿದ್ದರು.
