



ಬಳ್ಳಾರಿ, 19 ಆಗಸ್ಟ್ (ಹಿ.ಸ.)
ಆ್ಯಂಕರ್:
ಪ್ರತಿಯೊಬ್ಬರೂ ಸಂತೋಷ, ಸಫಲತೆ ಮತ್ತು ಸಶಕ್ತತೆಯನ್ನು ಸಾಧಿಸುವುದನ್ನು ತಿಳಿಸುವುದೇ ವಚನ ಸಾಹಿತ್ಯದ ಸಾರ ಎಂದು ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಹಂಪೆ ಹೇಮಕೂಟ ಶೂನ್ಯ ಸಿಂಹಾಸನಾಧೀಶ್ವರ ನಿರಂಜನ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಕೊಟ್ಟೂರು ಸ್ವಾಮಿ ಮಠದ ಅಕ್ಕನ ಬಳಗದ ಸಹಯೋಗದಲ್ಲಿ ನಡೆದ ಶಿವಾನುಭವಗೋಷ್ಠಿಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ವಚನ ಸಾಹಿತ್ಯವು ಪ್ರತಿಯೊಬ್ಬರೂ ಸಂತೋಷದಿಂದ ಜೀವನ ನಡೆಸಿ, ಸಶಕ್ತರಾಗಿ ದಿನಗಳನ್ನು ಕಳೆಯುತ್ತಾ ಪ್ರತಿಯೊಂದು ಕೆಲಸದಲ್ಲೂ ಸಫಲತೆಯನ್ನು ಸಾಧಿಸಬೇಕು. ಬದುಕಿನಂಥಹ ಅಮೂಲ್ಯವಾದ ವಸ್ತು ಭೂಮಿಯ ಮೇಲಿಲ್ಲ. ಬದುಕನ್ನು ಅರ್ಥಪೂರ್ಣವಾಗಿ ನಡೆಸುವುದೇ ವಚನ ಸಾಹಿತ್ಯದ ತಿರುಳು ಎಂದರು.
ಪ್ರಸ್ತುತ ಸನ್ನಿವೇಶದಲ್ಲಿ ಪ್ರತಿಯೊಬ್ಬರೂ ನಿತ್ಯ ಬೆಳಗಿನಿಂದ ರಾತ್ರಿಯವರೆಗಿನ ದಿನವನ್ನು ಸ್ವಯಂ ವಿಮರ್ಶೆ, ಸ್ವಯಂ ವಿಶ್ಲೇಷಣೆ ಮಾಡಿಕೊಳ್ಳುವ ಮೂಲಕ ಆತ್ಮಾವಲೋಕ ಮಾಡಿಕೊಳ್ಳಬೇಕು. ಈ ಮೂಲಕ ಆಯಾ ದಿನದ ತಪ್ಪು – ಒಪ್ಪುಗಳನ್ನು ತಿದ್ದಿಕೊಳ್ಳುವ – ಮುಂದುವರೆಸುವ ಪ್ರವೃತ್ತಿಯನ್ನು ಅಳವಡಿಸಿಕೊಂಡು ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದರು.
ನಿವೃತ್ತ ಶಿಕ್ಷಕಿ ಎಸ್.ಎಂ. ಜಯಶ್ರೀ ಅವರು `ವಚನ ಸಾಹಿತ್ಯದ ವೈಶಿಷ್ಟ್ಯ’ ವಿಷಯದ ಕುರಿತು ಮಾತನಾಡಿ, ಹನ್ನೆರಡನೆಯ ಶತಮಾನದಲ್ಲಿ ತಮಿಳುನಾಡು ಮತ್ತು ಕರ್ನಾಟಕದಲ್ಲಿ ವಚನ ಸಾಹಿತ್ಯ ಪ್ರಾರಂಭವಾಯಿತು. ಆದರೆ, ಕರ್ನಾಟಕದದಲ್ಲಿಯ ವಚನ ಸಾಹಿತ್ಯವು ಇಂದಿಗೂ ಜೀವಂತವಾಗಿದೆ ಎಂದರು.
ಕರ್ನಾಟಕದ ವಚನ ಸಾಹಿತ್ಯದಲ್ಲಿ ಅನುಭವ, ಪ್ರತಿಯೊಬ್ಬರ ಹಿತಚಿಂತನೆ, ಮಣ್ಣಿನಗುಣ, ಆಧ್ಯಾತ್ಮ, ಸಾಹಿತ್ಯ, ಸ್ವಾತಂತ್ರ್ಯ, ವ್ಯಕ್ತಿತ್ವ ಏನೆಲ್ಲಾ ಇವೆ. ಕಾರಣ ಕರ್ನಾಟಕದ ವಚನಕಾರರ ಸಾಹಿತ್ಯವು ನೈಸರ್ಗಿಕವಾಗಿ ಮೂಡಿದ್ದು, ನಮ್ಮ ವಚನ ಸಾಹಿತ್ಯವು ಕನ್ನಡದ ಶ್ರೀಮಂತ ಸಾಹಿತ್ಯವಾಗಿದೆ. ವಚನ ಸಾಹಿತ್ಯವು ವಿಶ್ವಮಟ್ಟದಲ್ಲಿ ಪ್ರಸಾರವಾಗುತ್ತಿರುವುದು ಸ್ವಾಗತಾರ್ಹ ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಬಿ. ಮಹಾರುದ್ರಗೌಡ ಅವರು, ಶ್ರೀಗಳಿಂದ ಸನ್ಮಾನ ಸ್ವೀಕರಿಸಿ, ಅನ್ನ, ಅಕ್ಷರ ಮತ್ತು ಆಸರೆಯ ತ್ರಿವಿಧ ದಾಸೋಹಿಗಳಾಗಿರುವ ಶ್ರೀಮಠವು ಸದಾಕಾಲ ಭಕ್ತರ ಹಿತ ಚಿಂತನೆ ಮಾಡುತ್ತಿರುವುದು ವಿಶೇಷ ಎಂದರು.
ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರ ಸಂಘದ ಅಧ್ಯಕ್ಷರೂ, ವೀರಶೈವ ವಿದ್ಯಾವರ್ಧಕ ಸಂಘದ ಶ್ರೀ ಪೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಅಧ್ಯಕ್ಷರಾಗಿರುವ ಕಲ್ಗುಡಿ ಮಂಜುನಾಥ್, ಕೇಂದ್ರ ಸಾಹಿತ್ಯ ಅಕಾಡಮಿಯ `ಬಾಲ ಸಾಹಿತ್ಯ’ ಪ್ರಶಸ್ತಿ ಪುರಸ್ಕøತ ಡಾ. ಶಿವಲಿಂಗಪ್ಪ ಕೆ. ಹಂದ್ಯಾಳ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ – ಗೌರವಿಸಲಾಯಿತು.
ಅಕ್ಕನ ಬಳಗದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಶ್ರೀಗುರು ಪುಟ್ಟರಾಜ ಗವಾಯಿಗಳ ಸಂಗೀತ ಪಾಠ ಶಾಲೆಯ ವಿದ್ಯಾರ್ಥಿಗಳು ಸಂಗೀತ ಸೇವೆ ಸಲ್ಲಿಸಿದರು. ಶ್ರೀಮತಿ ಮಧುಮತಿ ರಮೇಶ್ ಅವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಶಕುಂತಲ ಅವರು ವಂದನಾರ್ಪಣೆ ಸಲ್ಲಿಸಿದರು.
—————
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್
