ಕೋಲಾರ, ೨೧ ಅಕ್ಟೋಬರ್ (ಹಿ.ಸ) :
ಆ್ಯಂಕರ್ : ಸಾಲು ಸಾಲು ರಜೆಗಳ ಹಿನ್ನಲೆಯಲ್ಲಿ ನಗರದ ಜಿಲ್ಲಾಡಳಿತ ಭವನದಲ್ಲಿನ ಭೂದಾಖಲೆಗಳ ಇಲಾಖೆಯಲ್ಲಿ ಆಯುಧ ಪೂಜೆ ಮಹಾನವಮಿಯನ್ನು ಶನಿವಾರ ಆಚರಿಸಿದ್ದು, ಇಲಾಖೆಯ ಉಪನಿರ್ದೇಶಕಿ ಡಿ.ಭಾಗ್ಯಮ್ಮ ಪೂಜೆಯಲ್ಲಿ ಪಾಲ್ಗೊಂಡು ಸಿಬ್ಬಂದಿಗೆ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಯುಧಪೂಜೆ, ವಿಜಯದಶಮಿ ನಮ್ಮ ಕರ್ತವ್ಯನಿಷ್ಟೆ, ಜಯದ ಸಂಕೇತವಾಗಿದ್ದು, ಇಲಾಖೆಯ ಕೆಲಸ ಕಾರ್ಯಗಳ ವೇಗ ಹೆಚ್ಚಲು ತಾಯಿ ದುರ್ಗಾಮಾತೆ ಎಲ್ಲರಿಗೂ ಶಕ್ತಿ ನೀಡಲಿ ಎಂದು ಕೋರಿದರು.
ರಾಜಮಹಾರಾಜರ ಕಾಲದಿಂದಲೂ ನಡೆಸಿಕೊಂಡು ಬಂದಿರುವ ಈ ಸಂಪ್ರದಾಯ ನಿಜಕ್ಕೂ ಶ್ಲಾಘನೀಯವಾಗಿದ್ದು, ಪಾಂಡವರಿಗೆ ಜಯದ ಸಂಕೇತ ಈ ಹಬ್ಬವಾದರೆ ಸಾಮಾನ್ಯ ಜನರಾದ ನಮಗೆಲ್ಲಾ ಮಾಡುವ ಕೆಲಸದಲ್ಲಿ ನಿಷ್ಟೆ, ಭಕ್ತಿ ಮೂಡಿಸುವ ಪ್ರಯತ್ನವಾಗಿದೆ, ಹಬ್ಬದ ಮೂಲಕ ನಾವೆಲ್ಲಾ ಜನಪರ ಕೆಲಸಗಳನ್ನು ಬದ್ದತೆಯಿಂದ ಮಾಡುವ ಸಂಕಲ್ಪ ಮಾಡೋಣ ಎಂದು ತಿಳಿಸಿದರು.
ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ಬಾಬು ಸಿಬ್ಬಂದಿಗೆ ಶುಭ ಕೋರಿ, ಆಯಧಪೂಜೆ ಸಂಪ್ರದಾಯ ನಮ್ಮ ಹೆಮ್ಮೆಯಾಗಿದ್ದು, ಇಡೀ ವರ್ಷವೂ ನಮ್ಮ ಕರ್ತವ್ಯದಲ್ಲಿ ನೆರವಾದ ಸಲಕರಣೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಜೀವಂತ ಮನುಷ್ಯರಿಗೆ,ಪ್ರಾಣಿಗಳಿಗೆ ಮಾತ್ರವಲ್ಲ ನಿರ್ಜೀವವಾದರೂ ನಮ್ಮ ಕೆಲಸಕ್ಕೆ ನೆರವಾಗುವ ಸಲಕರಣೆಗಳಿಗೂ ಕೃತಜ್ಞತೆ ಸಲ್ಲಿಸುವ ಕಾರ್ಯ ಶ್ಲಾಘನೀಯ ಎಂದರು.
ಇಡೀ ವರ್ಷ ನಾವು ನಿರ್ವಹಿಸುವ ಕೆಲಸಕಾರ್ಯಗಳಿಗೆ ನೆರವಾಗುವ ಅನೇಕ ವಸ್ತುಗಳು ಪೂಜೆಗೆ ಅರ್ಹವೆಂಬ ಭಾವನೆಯನ್ನು ಆಯುಧಪೂಜೆ ಮೂಡಿಸಿದ್ದು, ನಾವು ಮಾಡುವ ಕೆಲಸದಲ್ಲೂ ಅಷ್ಟೇ ಶ್ರದ್ಧೆ,ಭಕ್ತಿ ಅಗತ್ಯವೆಂಬುದನ್ನು ಸಾರಿ ಹೇಳುವಂತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಅಜಯ್ಕುಮಾರ್, ರಾಜ್ಯಪರಿಷತ್ ಸದಸ್ಯ ಗೌತಮ್, ಭೂದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರಾದ ಹನುಮಂತರಾಯಪ್ಪ, ಅಶ್ವಿನಿ, ಅಧೀಕ್ಷಕ ರಾಜಶೇಖರ್, ಸೂಪರ್ ವೈಸರ್ ಜಯಲಕ್ಷಿö್ಮ, ಸಿಬ್ಬಂದಿ ಸುಭಾಷ್,ವಿಜಯಲಕ್ಷಿö್ಮ, ಶೋಭಾ, ಸಂಧ್ಯಾ, ನಮ್ರತಾ, ಮಂಜುಳಾ, ಸಂದೀಪ್, ಕೃಷ್ಣಮೂರ್ತಿ ಶಿವಕಾಂತ್ ಮತ್ತಿತರರಿದ್ದರು.
ಚಿತ್ರ :ಕೋಲಾರದ ಜಿಲ್ಲಾಡಳಿತ ಭವನದಲ್ಲಿನ ಸರ್ವೇ ಇಲಾಖೆ ಕಚೇರಿಯಲ್ಲಿ ಆಯುಧಪೂಜೆಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.
