
ಬೆಳಗಾವಿ, 2 ಡಿಸೆಂಬರ್(ಹಿ.ಸ):
ಆ್ಯಂಕರ್ :
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ ಐವತ್ತು ವರ್ಷಗಳೇ ಕಳೆದಿವೆ. ಇಡೀ ರಾಜ್ಯವೇ ಈ ವರ್ಷ ಸುವರ್ಣ ಕರ್ನಾಟಕ ಸಂಭ್ರಮದಲ್ಲಿದೆ. ಈ ಸಂಭ್ರಮದ ಮಧ್ಯೆಯೇ ಇದೀಗ ಪ್ರತ್ಯೇಕ ರಾಜ್ಯದ ಕೂಗು ಮತ್ತೇ ಕೇಳಿ ಬಂದಿದೆ. ಇಷ್ಟು ದಿನ ತಣ್ಣಗಾಗಿದ್ದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಎತ್ತಿದವರು ಯಾರು? ಅವರ ಬೇಡಿಕೆ ಏನು ಅಂತಿರಾ? ಈ ಸ್ಟೋರಿ ನೋಡಿ.
ಮತ್ತೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು
ರಾಜ್ಯದ ಹಿರಿಯ ರಾಜಕಾರಣಿ ಉಮೇಶ ಕತ್ತಿ ಜೀವಿತಾವಧಿಯಲ್ಲಿ ಅಭಿವೃದ್ಧಿ ವಿಚಾರದಲ್ಲಿ ಎಲ್ಲ ಸರ್ಕಾರಗಳಿಂದ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸುತ್ತಲೇ ಇದ್ದರು. ಈ ಭಾಗದ ಅಭಿವೃದ್ಧಿಗೆ ಸರ್ಕಾರಗಳು ಒತ್ತು ನೀಡಬೇಕು. ಆಗ ಮಾತ್ರ ಪ್ರಾದೇಶಿಕ ಅಸಮಾನತೆ ದೂರ ಮಾಡಲು ಸಾಧ್ಯ. ಈ ಭಾಗವನ್ನು ಅಭಿವೃದ್ಧಿ ಮಾಡದಿದ್ದರೆ ಉತ್ತರ ಕರ್ನಾಟಕ ಪ್ರತ್ಯೇಕವಾಗಬೇಕು ಎಂದು ಹಲವು ಸಲ ಮಾಧ್ಯಮಗಳ ಎದುರು ಉಮೇಶ ಕತ್ತಿ ಹೇಳಿಕೆ ನೀಡ್ತಿದ್ದರು.
ಉಮೇಶ ಕತ್ತಿ ನಿಧನದ ಬಳಿಕ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ನಿಂತಿತ್ತು. ಅಲ್ಲದೇ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿ ಇದೀಗ ಐವತ್ತು ವರ್ಷಗಳೇ ಕಳೆದಿವೆ. ಇಡೀ ರಾಜ್ಯವೇ ಇದೀಗ ಸುವರ್ಣ ಸಂಭ್ರಮದಲ್ಲಿದೆ. ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಮೊದಲ ಚಳಿಗಾಲ ಅಧಿವೇಶನಕ್ಕೆ ಕುಂದಾನಗರಿ ಬೆಳಗಾವಿ ಸಜ್ಜುಗೊಳ್ಳುತ್ತಿದೆ. ಇಷ್ಟು ದಿನ ಸೈಲೆಂಟ್ ಆಗಿದ್ದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಮತ್ತೆ ಕೇಳಿ ಬಂದಿದೆ. ಸ್ವತಃ ಉತ್ತರ ಕರ್ನಾಟಕ ಹೋರಾಟ ಸಮಿತಿ ಪದಾಧಿಕಾರಿಗಳು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಬೇಡಿಕೆ ಇಟ್ಟಿದ್ದಾರೆ. ಬೆಳಗಾವಿಯ ಸುವರ್ಣಸೌಧದಲ್ಲಿ ಡಿಸೆಂಬರ್ 4ರಿಂದ ಆರಂಭವಾಗಲಿರುವ ಚಳಿಗಾಲ ಅಧಿವೇಶನದಲ್ಲಿ ಈ ಭಾಗದ ಮಠಾಧೀಶರ ನೇತೃತ್ವದಲ್ಲಿ ಧರಣಿ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆಗಳಾಗಬೇಕು. ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂಬ ಸದಾಶಯದೊಂದಿಗೆ ದಶಕಗಳ ಹಿಂದೆಯೇ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಲಾಗಿದೆ. ಅಲ್ಲದೇ ಎಲ್ಲ ಸರ್ಕಾರಗಳು ಪ್ರತಿವರ್ಷ ಬೆಳಗಾವಿಯಲ್ಲಿ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಸುತ್ತಲೇ ಬಂದಿವೆ. ಚಳಿಗಾಲ ಅಧಿವೇಶನದಲ್ಲಿ ಮಾತ್ರ ಬಳಸಲಾಗುವ ಸುವರ್ಣಸೌಧ ವರ್ಷಪೂರ್ತಿಯೂ ಕ್ರಿಯಾಶೀಲವಾಗಿರಬೇಕು ಎಂಬುದು ಈ ಭಾಗದ ಹೋರಾಟಗಾರರ ಪ್ರಮುಖ ಬೇಡಿಕೆ. ಇದಕ್ಕಾಗಿ ಈ ಭಾಗದ ಅಭಿವೃದ್ಧಿಗೆ ಪೂರಕವಾಗುವ ರಾಜ್ಯಮಟ್ಟದ ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಬೇಕು ಎಂದು ಈ ಭಾಗದ ಹೋರಾಟಗಾರರು ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದಾರೆ. ಆದರೆ ಸರ್ಕಾರ ಮಾತ್ರ ಈ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಈ ಸಲದ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಚರ್ಚೆ ಆಗಬೇಕು. ಅಲ್ಲದೇ ಕಚೇರಿ ಸ್ಥಳಾಂತರ ಬಗ್ಗೆಯೂ ಸುದೀರ್ಘ ಚರ್ಚಿಸಿ ಸರ್ಕಾರ ಸ್ಪಷ್ಟ ನಿಲುವು ತಿಳಿಸಬೇಕು. ಇಲ್ಲವಾದರೆ ಉತ್ತರ ಕರ್ನಾಟಕ ಪ್ರತ್ಯೇಕ ಹೋರಾಟ ನಡೆಸುತ್ತೇವೆ. ಕಚೇರಿ ಸ್ಥಳಾಂತರಕ್ಕೆ ಆಗ್ರಹಿಸಿ ಅಧಿವೇಶನದಲ್ಲಿ ಧರಣಿ ನಡೆಸಲು ಉತ್ತರ ಕರ್ನಾಟಕ ಹೋರಾಟ ಸಮಿತಿ ನಿರ್ಧರಿಸಿದೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಭೀಮಪ್ಪ ಗಡಾಡ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
