ನವದೆಹಲಿ, 17 ಡಿಸೆಂಬರ್(ಹಿ.ಸ):
ಆ್ಯಂಕರ್ :
ದೇಶಾದ್ಯಂತ ಭಾರೀ ವಿವಾದವನ್ನೇ ಸೃಷ್ಟಿಸಿರುವ ಸಂಸತ್ನ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಕೊನೆಗೂ ಮೌನ ಮುರಿದಿರುವ ಪ್ರಧಾನಿ ನರೇಂದ್ರಮೋದಿ ಅವರು, ಇದು ಅತ್ಯಂತ ಗಂಭೀರವಾದ ಪ್ರಕರಣವಾಗಿದ್ದು, ಅಷ್ಟೇ ಆತಂಕಕಾರಿಯೂ ಹೌದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇದು ಗಂಭೀರವಾದ ವಿಚಾರ ಎಂಬುದರಲ್ಲಿ ಎರಡು ಮಾತಿಲ್ಲ. ಇದು ರಾಷ್ಟ್ರೀಯ ಭದ್ರತಾ ವಿಷಯವಾಗಿರುವುದರಿಂದ ಆಳವಾದ ತನಿಖೆ ನಡೆಯಬೇಕು. ಯಾರೊಬ್ಬರು ಇದರಲ್ಲಿ ರಾಜಕೀಯವನ್ನು ಬೆರೆಸಬಾರದೆಂದು ವಿರೋಧ ಪಕ್ಷಗಳು ಹಾಗೂ ದೇಶದ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಘಟನೆ ನಡೆದು ಐದು ದಿನಗಳ ನಂತರ ಮೊದಲ ಬಾರಿಗೆ ಅವರು ಮಾತನಾಡಿದ್ದಾರೆ. ಸಂಸತ್ನಲ್ಲಿ ನಡೆದ ಘಟನೆಯ ಗಂಭೀರತೆಯನ್ನು ನಾವು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಲೋಕಸಭೆಯ ಸ್ಪೀಕರ್ ಈಗಾಗಲೇ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಈ ಘಟನೆಯ ಹಿಂದಿನ ಉದ್ದೇಶ ಏನೆಂಬುದನ್ನು ತಿಳಿಯಲು ವಿಷಯದ ಆಳಕ್ಕೆ ಹೋಗುವುದು ಮುಖ್ಯ.
ಒಟ್ಟಾರೆ ನಮಗೆ ಪರಿಹಾರ ಸಿಗಬೇಕು. ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಪ್ರಕರಣವು ಗಂಭೀರವಾಗಿಯೇ ಇದೆ. ನಾವು ಕಡಿಮೆ ಅಂದಾಜು ಮಾಡಬಾರದು. ಡಿ.13ರಂದು ಏನಾಯಿತು ಎಂಬುದರ ಹಿಂದಿನ ಉದ್ದೇಶಗಳನ್ನು ತನಿಖೆ ಮಾಡಲು ಅಗತು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ.
ಈ ವಿಷಯದ ಬಗ್ಗೆ ಪ್ರತಿರೋಧಗಳಿಂದ ದೂರ ಇರಬೇಕು ಎಂದು ಮನವಿ ಮಾಡಿದ್ದಾರೆ. ಸಭಾಧ್ಯಕ್ಷರು ಪ್ರಕರಣದ ಬಗ್ಗೆ ಗಂಭೀರತೆಯಿಂದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ತನಿಖಾ ಸಂಸ್ಥೆಗಳು ಈ ಬಗ್ಗೆ ಕಟ್ಟುನಿಟ್ಟಾಗಿ ತನಿಖೆ ನಡೆಸುತ್ತಿವೆ. ಒಂದೇ ಮನಸ್ಸಿನಿಂದ ಪರಿಹಾರವನ್ನೂ ಕಂಡುಕೊಳ್ಳಬೇಕು. ತಪ್ಪು ಹುಡುಕುವುದರಿಂದ ಪರಿಹಾರ ಸಿಗುವುದಿಲ್ಲ. ಸಂಸತ್ ಒಳಗೆ ನುಗ್ಗಿದವರ ಉದ್ದೇಶಗಳು ಹಾಗೂ ಅದರ ಹಿಂದಿನ ಉದ್ದೇಶಗಳನ್ನು ನಮ್ಮ ತನಿಖಾಧಿಕಾರಿಗಳು ಪತ್ತೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ:
ಇನ್ನು ಮೋದಿ ಅವರು ತಮ್ಮ ಮಾತಿನ ಉದ್ದಕ್ಕೂ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಈಗ ದೇಶದ ಜನತೆಯ ನಂಬಿಕೆ ಕಳೆದುಕೊಂಡಿರುವ ರಾಜಕೀಯ ಪಕ್ಷವಾಗಿದೆ. ಇತಿಹಾಸದ ಶತಮಾನವುಳ್ಳ ಪಕ್ಷವನ್ನು ನಂಬುವ ಸ್ಥಿತಿಯಲ್ಲಿ ಯಾರೊಬ್ಬರು ಇಲ್ಲ ಎಂದು ಕಿಡಿಕಾರಿದ್ದಾರೆ.
ಪ್ರತಿಯೊಂದರಲ್ಲೂ ತಪ್ಪು ಹುಡುಕುವುದು ಕಾಂಗ್ರೆಸ್ನ ಹುಟ್ಟಗುಣ. ಸಾಲು ಸಾಲು ಸೋಲುಗಳನ್ನು ಅನುಭವಿಸಿದ್ದರೂ ತನ್ನ ತಪ್ಪನ್ನು ತಿದ್ದುಕೊಳ್ಳದೆ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ನಾವು ಸ್ಪಷ್ಟ ಜನಾದೇಶ ಪಡೆಯಲಿದ್ದೇವೆ. 2019ರ ಲೋಕಸಭೆ ಚುನಾವಣೆಯಲ್ಲಿ ಗಳಿಸಿದ ಸ್ಥಾನಕ್ಕಿಂತಲೂ ಹೆಚ್ಚಿನ ಸ್ಥಾನವನ್ನು ಬಿಜೆಪಿಗೆ ದೇಶದ ಜನತೆ ನೀಡಲಿದ್ದಾರೆ. ಕೇಂದ್ರದಲ್ಲಿ ನಾವು ಮೂರನೇ ಬಾರಿಗೆ ಅಧಿಕಾರಕ್ಕೆ ಬರುವುದನ್ನು ಯಾವುದೇ ಶಕ್ತಿಗಳು ತಡೆಯುವುದಿಲ್ಲ ಎಂದು ಆತ್ಮವಿಶ್ವಾಸದಿಂದ ಮೋದಿ ನುಡಿದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ಬ್ರಹ್ಮಾಂಡದ ಯಾವುದೇ ಶಕ್ತಿಯು ಈಗ ಆಗಸ್ಟ್ 2019 ರ ನಿರ್ಧಾರವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
