ನವದೆಹಲಿ, 16ಅಕ್ಟೋಬರ್ (ಹಿ.ಸ):
ಆ್ಯಂಕರ್ :
ಮುಂಬರುವ ಛತ್ತೀಸ್ಗಢ ವಿಧಾನಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ ಇಲ್ಲಿಯವರೆಗೆ ೮೫ ಅಭ್ಯರ್ಥಿಗಳನ್ನು ಘೋಷಿಸಿದೆ. ಇದೇ ವೇಳೆ ಆಡಳಿತಾರೂಢ ಕಾಂಗ್ರೆಸ್ ಒಟ್ಟು ೯೦ ಕ್ಷೇತ್ರಗಳ ವಿಧಾನಸಭೆಗೆ ೩೦ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದೆ. ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಮೊದಲ ಹಂತದಲ್ಲಿ ೨೦ ವಿಧಾನಸಭಾ ಕ್ಷೇತ್ರಗಳು ಬಹುತೇಕ ನಕ್ಸಲ್ ಪೀಡಿತ ಪ್ರದೇಶಗಳಾಗಿದ್ದು ನವೆಂಬರ್ ೭ರಂದು ಮತದಾನ ನಡೆಯಲಿದೆ. ಇನ್ನು ನವೆಂಬರ್ ೧೭ರಂದು ನಡೆಯಲಿರುವ ಎರಡನೇ ಹಂತದಲ್ಲಿ ೭೦ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಇದೇ ವೇಳೆ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೊಳಿಸಲಾಗಿದ್ದು, ಗಡಿ ಪ್ರದೇಶಗಳಲ್ಲಿ ಪೊಲೀಸ್ ಮತ್ತು ಅಬಕಾರಿ ಇಲಾಖೆಯಿಂದ ಶೋಧ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಿದೆ. ಛತ್ತೀಸ್ಗಢದಲ್ಲಿ ವಿಧಾನಸಭಾ ಚುನಾವಣೆಯ ವೇಳೆ ಮತದಾರರನ್ನು ಸೆಳೆಯಲು ಮದ್ಯದ ಹರಿವನ್ನು ತಡೆಯಲು ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಛತ್ತೀಸ್ ಗಢದ ಗಡಿ ಪ್ರದೇಶಗಳಲ್ಲಿ ಅಬಕಾರಿ ಇಲಾಖೆ ಸ್ಥಾಪಿಸಿರುವ ೩೧ ಚೆಕ್ ಪೋಸ್ಟ್ಗಳಲ್ಲಿ ಬೇರೆ ರಾಜ್ಯಗಳಿಂದ ಬರುವ ವಾಹನಗಳನ್ನು ತೀವ್ರ ಶೋಧ ನಡೆಸಲಾಗುತ್ತಿದೆ. ವಾಹನಗಳ ತಪಾಸಣೆಗೆ ಇಲಾಖೆಯು ಫ್ಲೈಯಿಂಗ್ ಸ್ಕ್ವಾಡ್ಗಳನ್ನೂ ರಚಿಸಿದೆ. ವಿವಿಧ ರೈಲು ನಿಲ್ದಾಣಗಳು, ರೈಲುಗಳು, ಬಸ್ ನಿಲ್ದಾಣಗಳು ಮತ್ತು ಬಸ್ಸುಗಳನ್ನು ಸಹ ಅಬಕಾರಿ ಇಲಾಖೆ ಸಿಬ್ಬಂದಿ ರೈಲ್ವೆ ಪೊಲೀಸರು ಮತ್ತು ರಾಜ್ಯ ಪೊಲೀಸರ ಸಹಯೋಗದೊಂದಿಗೆ ತೀವ್ರವಾಗಿ ಪರಿಶೀಲಿಸುತ್ತಿದ್ದಾರೆ. ಸುಮಾರು ೭೫ ಲಕ್ಷ ಮೌಲ್ಯದ ೨೫ ಸಾವಿರ ಲೀಟರ್ಗೂ ಹೆಚ್ಚು ಮದ್ಯವನ್ನು ಇಲಾಖೆ ವಶಪಡಿಸಿಕೊಂಡಿದೆ. ಅಲ್ಲದೆ, ಅಪಾರ ಪ್ರಮಾಣದ ಮಹುವಾ ಮತ್ತು ಗಾಂಜಾ ಕೂಡ ಪತ್ತೆಯಾಗಿದೆ. ಅಕ್ರಮ ಮದ್ಯ ಸಾಗಾಟದ ಬಗ್ಗೆ ಮಾಹಿತಿ ನೀಡಲು ಇಲಾಖೆಯು ಟೋಲ್ ಫ್ರೀ ಸಂಖ್ಯೆ – ೧೪೪೦೫ ಅನ್ನು ಸಹ ನೀಡಿದೆ.
ಹಿಂದೂಸ್ತಾನ್ ಸಮಾಚಾರ್
