
ನವದಹೆಲಿ, 28 ಡಿಸೆಂಬರ್(ಹಿ.ಸ):
ಆ್ಯಂಕರ್ :
ನವದೆಹಲಿಯಲ್ಲಿ ಮುಖ್ಯ ಕಾರ್ಯದರ್ಶಿಗಳ ರಾಷ್ಟ್ರೀಯ ಸಮ್ಮೇಳನ ಆರಂಭವಾಗಿದೆ. ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತು ನಾಳೆ ಅಧ್ಯಕ್ಷತೆ ವಹಿಸಲಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಹಭಾಗಿತ್ವದ ಆಡಳಿತ ಮತ್ತು ಪಾಲುದಾರಿಕೆಯನ್ನು ಉತ್ತೇಜಿಸಲು ಈ ಸಮ್ಮೇಳನ ಆಯೋಜಿಸಲಾಗಿದೆ. ಇದು ಇಂತಹ ಮೂರನೇ ಸಮ್ಮೇಳನವಾಗಿದೆ, ಈ ಮೊದಲು ೨೦೨೨ರಲ್ಲಿ ಧರ್ಮಶಾಲಾದಲ್ಲಿ ಮೊದಲ ಹಾಗೂ ಕಳೆದ ವರ್ಷದ ಜನವರಿಯಲ್ಲಿ ಎರಡನೇ ಸಮ್ಮೇಳನ ದೆಹಲಿಯಲ್ಲಿಯೇ ನಡೆದಿತ್ತು.
ಈ ಸಮ್ಮೇಳನದಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಗಳು, ಮುಖ್ಯ ಕಾರ್ಯದರ್ಶಿಗಳು ಮತ್ತು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳು ಸೇರಿದಂತೆ ೨೦೦ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಈ ವರ್ಷದ ಮುಖ್ಯ ಕಾರ್ಯದರ್ಶಿಗಳ ರಾಷ್ಟ್ರೀಯ ಸಮ್ಮೇಳನದ ಪ್ರಮುಖ ಕೇಂದ್ರ ಬಿಂದು ಸುಲಲಿತ ಜೀವನ” ಎಂಬುದಾಗಿರುತ್ತದೆ. ಸಾಮಾನ್ಯ ಅಭಿವೃದ್ಧಿ ಕಾರ್ಯಸೂಚಿಯ ಅನುಷ್ಠಾನಕ್ಕೆ ಈ ಸಮ್ಮೇಳನ ಒತ್ತು ನೀಡಲಿದೆ.
ಭೂಮಿ ಮತ್ತು ಆಸ್ತಿ, ವಿದ್ಯುತ್, ಕುಡಿಯುವ ನೀರು, ಆರೋಗ್ಯ ಮತ್ತು ಶಾಲಾ ಶಿಕ್ಷಣ ವಿಷಯಾಧಾರಿತವಾಗಿ ಹಾಗೂ ಸೈಬರ್ ಭದ್ರತೆ-ಭವಿಷ್ಯದ ಸವಾಲುಗಳು, ಕೃತಕ ಬುದ್ಧಿಮತ್ತೆಯ ದೃಷ್ಟಿಕೋನ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ. ಈ ಸಮ್ಮೇಳನದಲ್ಲಿ ಅಮೃತ ಸರೋವರ, ಪ್ರವಾಸೋದ್ಯಮ ಉತ್ತೇಜನ, ಪಿಎಂ ವಿಶ್ವಕರ್ಮ ಯೋಜನೆ, ಪಿಎಂ ಸ್ವನಿಧಿ ಯೋಜನೆ ಮತ್ತಿತರ ವಿಷಯಗಳ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ.
ಹಿಂದೂಸ್ತಾನ್ ಸಮಾಚಾರ್
