ನವದೆಹಲಿ,10ನವೆಂಬರ್ (ಹಿ.ಸ):
ಆ್ಯಂಕರ್ :
ಭಾರತ-ಅಮೆರಿಕ ೨ ಪ್ಲಸ್ ೨ ಸಚಿವರ ಸಂವಾದ ಇಂದು ನವದೆಹಲಿಯಲ್ಲಿ ನಡೆಯಲಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರು ಅಮೆರಿಕ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕೆನ್ ಮತ್ತು ರಕ್ಷಣಾ ಸಚಿವ ಲಾಯ್ಡ್ ಆಸ್ಟಿನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
೨ ಪ್ಲಸ್ ೨ ಸಭೆಯಲ್ಲಿ ರಕ್ಷಣೆ ಮತ್ತು ಭದ್ರತಾ ಸಹಕಾರ, ತಂತ್ರಜ್ಞಾನ ಮೌಲ್ಯ ಸರಪಳಿ ಸಹಯೋಗಗಳು ಮತ್ತು ಜನರಿಂದ ಜನರ ಸಂಬಂಧಗಳ ಅಂಶಗಳಲ್ಲಿ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸುವ ನಿರೀಕ್ಷೆ ಇದೆ.
ಈ ವರ್ಷದ ಜೂನ್ ಮತ್ತು ಸೆಪ್ಟೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಚರ್ಚೆ ನಡೆಸಿ, ಉಭಯ ದೇಶಗಳ ಪಾಲುದಾರಿಕೆಗಾಗಿ ಭವಿಷ್ಯದ ಮಾರ್ಗಸೂಚಿಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಕುರಿತು ಚರ್ಚಿಸಿದ್ದರು ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಸಮಕಾಲೀನ ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಸಮಾಲೋಚಿಸಲಾಗುವುದು. ಬಹುಪಕ್ಷೀಯ ವೇದಿಕೆಗಳಲ್ಲಿ ಮತ್ತು ಕ್ವಾಡ್ನಂತಹ ಚೌಕಟ್ಟುಗಳ ಮೂಲಕ ಸಹಕಾರವನ್ನು ವರ್ಧಿಸಲು ಹಂಚಿಕೆಯ ಆದ್ಯತೆಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ೨ ಪ್ಲಸ್ ೨ ಸಚಿವ ಸಭೆ ಮುಖ್ಯವಾಗಿದೆ. ಇದು ಭಾರತ-ಅಮೆರಿಕ ನಡುವಿನ ಸಮಗ್ರ ಜಾಗತಿಕ ರಚನಾತ್ಮಕ ಪಾಲುದಾರಿಕೆಯ ಪ್ರಮುಖ ಭಾಗವಾಗಿದೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್
