ಗ್ವಾಲಿಯರ್,21ಅಕ್ಟೋಬರ್ (ಹಿ.ಸ):
ಆ್ಯಂಕರ್ :
ಪ್ರಧಾನಿ ನರೇಂದ್ರ ಮೋದಿ ಇಂದು ಮಧ್ಯಪ್ರದೇಶದ ಗ್ವಾಲಿಯರ್ಗೆ ಭೇಟಿ ನೀಡಲಿದ್ದು, ಸಿಂಧಿಯಾ ಶಾಲೆಯ ೧೨೫ನೇ ಸಂಸ್ಥಾಪನಾ ದಿನ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಿಂಧಿಯಾ ಶಾಲೆಯ ಪ್ರಾಂಶುಪಾಲರಾದ ಅಜಯ್ ಸಿಂಗ್ ಈ ಮಾಹಿತಿ ನೀಡಿದ್ದು, ಸಂಜೆ ೫ ಗಂಟೆಗೆ ಆಯೋಜಿಸಲಾಗಿರುವ ಶಾಲೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಸುಮಾರು ಎರಡು ಗಂಟೆಗಳ ಕಾಲ ಶಾಲಾ ಆವರಣದಲ್ಲಿ ಇರಲಿರುವ ನರೇಂದ್ರ ಮೋದಿ ಅವರು, ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಯಾರಿಸಿರುವ ಆವಿಷ್ಕಾರಗಳನ್ನು ವೀಕ್ಷಿಸಲಿದ್ದಾರೆ. ಅಲ್ಲದೆ, ಈ ವರ್ಷದಲ್ಲಿ ಶಾಲೆಯ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರಧಾನಿ ಅವರು ಸನ್ಮಾನಿಸಲಿದ್ದಾರೆ. ಮಧ್ಯಪ್ರದೇಶದ ರಾಜ್ಯಪಾಲ ಮಂಗುಭಾಯಿ ಪಟೇಲ್, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮಾರ್, ಜ್ಯೋತಿರಾಧಿತ್ಯ ಸಿಂದಿಯಾ ಮತ್ತು ಜಿತೇಂದ್ರ ಸಿಂಗ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಪ್ರಧಾನಿಯವರ ಆಗಮನದ ಹಿನ್ನೆಲೆಯಲ್ಲಿ ಗ್ವಾಲಿಯರ್ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಸಿಂಗ್ ಚಂಡೇಲಾ ಅವರು ಸುಮಾರು ೩ ಸಾವಿರ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
