ದೆಹಲಿ, 16 ಜನವರಿ(ಹಿ.ಸ):
ಆ್ಯಂಕರ್ :
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದಿನಿಂದ ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಗಳಿಗೆ ಎರಡು ದಿನಗಳ ಭೇಟಿ ನೀಡಲಿದ್ದಾರೆ. ಪ್ರಧಾನಿಯವರು ಆಂಧ್ರಪ್ರದೇಶದಲ್ಲಿ ಸುಂಕ, ಪರೋಕ್ಷ ತೆರಿಗೆಗಳು ಮತ್ತು ನಾರ್ಕೋಟಿಕ್ಸ್ ರಾಷ್ಟ್ರೀಯ ಅಕಾಡೆಮಿಯ ನೂತನ ಸಂಕೀರ್ಣವನ್ನು ಉದ್ಘಾಟಿಸಲಿದ್ದಾರೆ. ಭಾರತೀಯ ಕಂದಾಯ ಸೇವೆ (ಸುಂಕ ಮತ್ತು ನೇರ ತೆರಿಗೆಗಳು) ಯ ೭೪ ನೇ ಮತ್ತು ೭೫ನೇ ಪ್ರಶಿಕ್ಷಣಾರ್ಥಿಗಳೊಂದಿಗೆ ಮತ್ತು ಭೂತಾನ್ನ ರಾಯಲ್ ಸಿವಿಲ್ ಸರ್ವೀಸ್ ನ ಪ್ರಶಿಕ್ಷಣಾರ್ಥಿಗಳೊಂದಿಗೆ ಕೂಡಾ ಪ್ರಧಾನಿ ಸಂವಾದ ನಡೆಸಲಿದ್ದಾರೆ. ಬುಧವಾರದಂದು ಪ್ರಧಾನಿಯವರು, ಕೇರಳದ ಗುರುವಾಯೂರ್ ದೇವಾಲಯದಲ್ಲಿ ದರ್ಶನ ಪಡೆದು ಪೂಜೆ ಸಲ್ಲಿಸಲಿದ್ದಾರೆ, ತ್ರಿಪ್ರಯಾರ್ ಶ್ರೀ ರಾಮಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಕೊಚ್ಚಿಗೆ ಭೇಟಿ ನೀಡುವ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ನಾಲ್ಕು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಮೂರು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಈ ಪ್ರಮುಖ ಮೂಲಸೌಕರ್ಯ ಯೋಜನೆಗಳು ಭಾರತದ ಬಂದರುಗಳು, ಹಡಗುಗಳು ಮತ್ತು ಜಲಮಾರ್ಗಗಳ ವಲಯವನ್ನು ಪರಿವರ್ತಿಸುವ ಪ್ರಧಾನ ಮಂತ್ರಿಯವರ ದೂರದೃಷ್ಟಿಗೆ ಅನುಗುಣವಾಗಿವೆ.
ಹಿಂದೂಸ್ತಾನ್ ಸಮಾಚಾರ್
