ನವದೆಹಲಿ, 29ಅಕ್ಟೋಬರ್ (ಹಿ.ಸ):
ಆ್ಯಂಕರ್ :ದೇಶಾದ್ಯಂತ ನಡೆದ ’ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮದ ಸಮಾರೋಪ ಸಮಾರಂಭ ನಾಳೆ ಮತ್ತು ನಾಡಿದ್ದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿದೆ. ಅಕ್ಟೋಬರ್ ೩೧ ರಂದು ನವದೆಹಲಿಯ ಕರ್ತವ್ಯ ಪಥದಲ್ಲಿ ಅಭಿಯಾನದ ಸಮಾರೋಪ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಈ ಅಭಿಯಾನಕ್ಕಾಗಿ ದೇಶಾದ್ಯಂತದಿಂದ ಅಮೃತ್ ಕಲಶಗಳನ್ನು ನವದೆಹಲಿಗೆ ತರಲಾಗುತ್ತಿದೆ. ಸ್ವಾತಂತ್ರ್ಯದ ೭೫ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮಾರ್ಚ್ ೧೨, ೨೦೨೧ರಂದು ಪ್ರಾರಂಭವಾದ ಆಜಾದಿ ಕಾ ಅಮೃತ್ ಮಹೋತ್ಸವದ ಎರಡು ವರ್ಷಗಳ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ಇರುವ ’ಅಮೃತ ವಾಟಿಕ ಉದ್ಯಾನ’ದ ಗಿಡಗಳಿಗೆ ಹಾಕಲು ದೇಶದೆಲ್ಲೆಡೆಯಿಂದ ಸಂಗ್ರಹಿಸಿರುವ ಮಣ್ಣನ್ನು ಬಳಸಲಾಗುವುದು. ಅಮೃತ ವಾಟಿಕ ಉದ್ಯಾನ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ’ಏಕ್ ಭಾರತ್ ಶ್ರೇಷ್ಠ ಭಾರತ್’ ಚಿಂತನೆಯ ಭವ್ಯ ಸಂಕೇತವಾಗಿದೆ. ’ಅಮೃತ ಕಳಶ’ಗಳನ್ನು ಬೆಂಗಳೂರಿನಿಂದ ದೆಹಲಿಗೆ ಕೊಂಡೊಯ್ಯುತ್ತಿರುವ ವಿಶೇಷ ರೈಲು ಇಂದು ರಾಷ್ಟ್ರ ರಾಜಧಾನಿ ತಲುಪಲಿದೆ. ಅದೇ ರೀತಿ ಜಮ್ಮುವಿನಿಂದ ನವದೆಹಲಿಗೂ ವಿಶೇಷ ರೈಲು ನಿನ್ನೆ ತನ್ನ ಪ್ರಯಾಣ ಆರಂಭಿಸಿದೆ. ಕೇಂದ್ರ ಸರ್ಕಾರ ಸಂಸ್ಕೃತಿ, ಕ್ರೀಡೆ ಮತ್ತು ಪ್ರವಾಸೋದ್ಯಮ ಸಚಿವಾಲಯಗಳು ಹಾಗೂ ಎಲ್ಲ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಆಯೋಸಿರುವ ನನ್ನ ಮಣ್ಣು ನನ್ನ ದೇಶ ಅಭಿಯಾನವನ್ನು ನಾಲ್ಕು ಹಂತದಲ್ಲಿ ಅಂದರೆ, ಗ್ರಾಮಗಳು, ಗ್ರಾಮಪಂಚಾಯಿತಿ, ತಾಲೂಕು ಹಾಗೂ ರಾಷ್ಟ್ರಮಟ್ಟದಲ್ಲಿ ನಡೆಸಲಾಯಿತು.
ಹಿಂದೂಸ್ತಾನ್ ಸಮಾಚಾರ್
