
ದೆಹಲಿ, 17 ಜನವರಿ(ಹಿ.ಸ):
ಆ್ಯಂಕರ್ :
ಕೇರಳಕ್ಕೆ ಎರಡು ದಿನಗಳ ಭೇಟಿ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ತ್ರಿಶೂರ್ ಜಿಲ್ಲೆಯ ಐತಿಹಾಸಿಕ ಗುರುವಾಯೂರು ಶ್ರೀ ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ದರ್ಶನ ಹಾಗೂ ಪೂಜೆಯನ್ನು ನೆರವೇರಿಸಿದರು. ಸಾಂಪ್ರದಾಯಿಕ ಉಡುಗೆಯಲ್ಲಿ ಅವರು, ದೇವಾಲಯಕ್ಕೆ ಭೇಟಿ ನೀಡಿದರು. ಗುರುವಾಯುರಿಗೆ ಆಗಮಿಸಿದ ಪ್ರಧಾನಿಯವರನ್ನು ಅಪಾರ ಸಂಖ್ಯೆಯ ಬಿಜೆಪಿ ಬೆಂಬಲಿಗರು ಹಾಗೂ ಕಾರ್ಯಕರ್ತರು ಸ್ವಾಗತಿಸಿದರು. ಬಳಿಕ ಪ್ರಧಾನಿಯವರು, ಮಾಜಿ ಸಂಸದ ಹಾಗೂ ನಟ ಸುರೇಶ್ ಗೋಪಿಯವರ ಪುತ್ರಿಯ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ ನಂತರ ಪ್ರಧಾನಮಂತ್ರಿಯವರು ತ್ರಿಪ್ರಯಾರ್ನ ಶ್ರೀರಾಮಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ದರ್ಶನ ಪಡೆದು ಪೂಜೆ ನೆರವೇರಿಸಿದರು. ನಂತರ ಪ್ರಧಾನಿ ಅವರು ಕೊಚ್ಚಿನ್ನ ವೆಲ್ಲಿಂಗ್ಟನ್ ದ್ವೀಪದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸುಮಾರು ೪ ಸಾವಿರ ಕೋಟಿ ರೂಪಾಯಿ ಮೊತ್ತದ ಮೂರು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದರಲ್ಲಿ ೧ ಸಾವಿರದ ೮೦೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ನ್ಯೂ ಡ್ರೈ ಡಾಕ್, ೯೭೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಅಂತಾರಾಷ್ಟ್ರೀಯ ಹಡಗು ದುರಸ್ತಿ ಸೌಕರ್ಯ ಸೇರಿದೆ. ಅಲ್ಲದೆ, ಪ್ರಧಾನಿ ಅವರು ಪುತುವೈಪೀನ್ ನಲ್ಲಿ ಭಾರತೀಯ ತೈಲ ಕಂಪನಿಯ ಎಲ್ ಪಿಜಿ ಆಮದು ಟರ್ಮಿನಲ್ ಅನ್ನು ಉದ್ಘಾಟಿಸಲಿದ್ದಾರೆ. ಬಳಿಕ ಪ್ರಧಾನಮಂತ್ರಿ ಅವರು ಕೊಚ್ಚಿಯಲ್ಲಿ ಬಿಜೆಪಿ ಶಕ್ತಿ ಕೇಂದ್ರಗಳ ಉಸ್ತುವಾರಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
