ಉತ್ತರಕಾಶಿ,24ನವೆಂಬರ್ (ಹಿ.ಸ):
ಆ್ಯಂಕರ್ : ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ಕರೆ ತರಲು ರಕ್ಷಣಾ ಸಿಬ್ಬಂದಿ ವಿಸ್ತ್ರತ ಯೋಜನೆಯೊಂದನ್ನು ಸಿದ್ದಪಡಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ ಇಂದು 41 ಜನರನ್ನು ಒಬ್ಬರಾದ ಮೇಲೆ ಒಬ್ಬರಂತೆ ಚಕ್ರವಿರುವ ಪುಟ್ಟ ಸ್ಟೆಚರ್ ಮೇಲೆ ಮಲಗಿಸಿ ಹೊರತರಲು ಎಲ್ಲಾ ಸಿದ್ಧತೆ ನಡೆಸಲಾಗಿದೆ.
ಹಲವು ಅಡ್ಡಿಗಳ ನಡುವೆ ರಕ್ಷಣಾ ಕಾರ್ಯ ಗುರುವಾರವೂ ಮುಂದುವರಿದಿದ್ದು, ಇಂದುಮುಕ್ತಾಯಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಾರ್ಮಿಕರು ಸಿಕ್ಕಿಬಿದ್ದ ಸ್ಥಳವು, ಸುರಂಗ ದ್ವಾರದಿಂದ 57 ಮೀ. ದೂರದಲ್ಲಿದೆ. ಅಲ್ಲಿಗೆ ಕಾರ್ಮಿಕರ ಕರೆತರಲು 80 ಸೆಂ.ಮೀ ಅಗಲದ ಪೈಪ್ ಅನ್ನುಸುರಂಗ ಕೊರೆದು ತೂರಿಸಲಾಗುತ್ತಿದೆ. ಈಪ್ರಕ್ರಿಯೆ ಬುಧವಾರವೇ ಮುಗಿಯಬೇಕಿತ್ತಾದರೂ, ಪೈಪ್ ಸಾಗುವ ಮಾರ್ಗದಲ್ಲಿ ಕಬ್ಬಿಣದ ಮೆಷ್ ಅಡ್ಡ ಬಂದ ಕಾರಣ ಅದನ್ನು ತೆರವು ಮಾಡಿ ಪೈಪ್ ಮುಂದೆ ತೂರಿಸುವ ಕೆಲಸಕ್ಕೆ 6 ಗಂಟೆ ಅಡ್ಡಿಯಾಗಿತ್ತು. ಬಳಿಕ ಅಡ್ಡಿ ತೆರವಾಗಿದೆ. ಗುರುವಾರ ಸಂಜೆವರೆಗೂ 47 ಮೀ.ವರೆಗೆ ಪೈಪ್ ಹಾಕಲಾಗಿದೆ. ಇನ್ನು 10 ಮೀ. ಮಾತ್ರ ಬಾಕಿ ಇದೆ. ಈ ವೇಳೆಯೂ ಅಡ್ಡಿ ಎದುರಾಗಿದೆ. ಹೀಗಾಗಿ ಇಂದು ಶುಭ ಸಮಾಚಾರ ಹೊರಬೀಳುವ ನಿರೀಕ್ಷೆ ಇದೆ.
ಹಿಂದೂಸ್ತಾನ್ ಸಮಾಚಾರ್
