ಅಯೋಧ್ಯೆ, 30 ಡಿಸೆಂಬರ್(ಹಿ.ಸ):
ಆ್ಯಂಕರ್ :
ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರಪ್ರದೇಶದ ಅಯೋಧ್ಯೆಯಲ್ಲಿ ೧೫ ಸಾವಿರ ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಲೋಕಾರ್ಪಣೆ ಮಾಡಿ, ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಯೋಧ್ಯಾಧಾಮ ಜಂಕ್ಷನ್ ಎಂದು ಮರುನಾಮಕರಣಗೊಂಡಿರುವ ನವೀಕೃತ ಅಯೋಧ್ಯಾ ರೈಲು ನಿಲ್ದಾಣ ಹಾಗೂ ಹೊಸ ಅಮೃತ ಭಾರತ್ ಮತ್ತು ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಲಿದ್ದಾರೆ. ಮಧ್ಯಾಹ್ನ, ಹೊಸದಾಗಿ ನಿರ್ಮಿಸಲಾಗಿರುವ ಅಯೋಧ್ಯೆ ವಿಮಾನ ನಿಲ್ದಾಣವನ್ನು ಪ್ರಧಾನಿ ಉದ್ಘಾಟಿಸಿ, ೧೫ ಸಾವಿರದ ೭೦೦ ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಯೋಧ್ಯೆಧಾಮ ರೈಲ್ವೆ ಜಂಕ್ಷನ್ ನಿಲ್ದಾಣವನ್ನು ೨೪೦ ಕೋಟಿ ರೂಪಾಯಿಗೂ ಅಧಿಕ ಮೊತ್ತದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ನಿತ್ಯ ಸಂಚರಿಸುವ ಒಂದು ಲಕ್ಷ ಪ್ರಯಾಣಿಕರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಒಟ್ಟು ೬ ಹೊಸ ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಪ್ರಧಾನಿ ಅವರು ಹಸಿರು ನಿಶಾನೆ ತೋರಲಿದ್ದು, ಈ ಪೈಕಿ ದಕ್ಷಿಣ ರೈಲು ವಿಭಾಗಕ್ಕೆ ಎರಡು ವಂದೇ ಭಾರತ್ ರೈಲುಗಳ ಸೇವೆ ದೊರೆಯಲಿದೆ. ಕರ್ನಾಟಕದ ಮಂಗಳೂರಿನಿಂದ ಗೋವಾದ ಮಡಗಾಂವ್ವರೆಗೆ ಹಾಗೂ ತಮಿಳುನಾಡಿನ ಕೊಯಮತ್ತೂರು ಜಂಕ್ಷನ್ನಿಂದ ಬೆಂಗಳೂರು ಕಂಟೋನ್ಮೆಂಟ್ ಸಂಚರಿಸುವ ವಂದೇ ಭಾರತ್ ರೈಲುಗಳು ಇದರಲ್ಲಿ ಪ್ರಮುಖವಾಗಿವೆ.
ಹಿಂದೂಸ್ತಾನ್ ಸಮಾಚಾರ್
